ಬೆಂಗಳೂರು: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ ನಡುವೆ ವಾಕ್ಸಮರ ಮುಂದುವರೆದಿದೆ. ಅವಕಾಶ ಸಿಕ್ಕಾಗ ಪರಸ್ಪರರು ಪರ- ವಿರೋಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕ್ಷೇತ್ರದ ಜನತೆಗೆ ಒಂದು ರೀತಿ ಮನರಂಜನೆಯಂತಾಗಿದೆ.
ಸೂಲಿಬೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, ರಾಜಕಾರಣದಲ್ಲಿ ಎರಡು ರೀತಿಯ ವ್ಯಕ್ತಿತ್ವಗಳು ಇರುತ್ತವೆ. ಒಂದು ಹುಲಿ, ಸಿಂಹದಂತಹ ವ್ಯಕ್ತಿತ್ವ. ಇನ್ನೊಂದು ಗುಳ್ಳೇ ನರಿಯಂತಹ ವ್ಯಕ್ತಿತ್ವ. ಜನತೆ ಹುಲಿ, ಸಿಂಹದಂತಹ ವ್ಯಕ್ತಿತ್ವದ ರಾಜಕಾರಣವನ್ನು ಇಷ್ಟಪಡುತ್ತಾರೆ. ಹೊಸಕೋಟೆ ತಾಲೂಕಿನ 5 ದಶಗಳ ರಾಜಕೀಯದಲ್ಲಿ ಹುಲಿ-ಸಿಂಹಗಳ ಮಧ್ಯೆ ರಾಜಕಾರಣ ನಡೆಯುತ್ತಿತ್ತು. ಒಂದು ಕಡೆ ಬಚ್ಚೇಗೌಡರ ಕುಟುಂಬ, ಚೆನ್ನಭೈರೇಗೌಡರು ಇದ್ದರೆ ಇನ್ನೊಂದೆಡೆ ಚಿಕ್ಕೇಗೌಡರು, ಮುನೇಗೌಡರ ಕುಟುಂಬದವರು ಹುಲಿ, ಸಿಂಹದಂತಹ ರಾಜಕಾರಣ ಮಾಡಿಕೊಂಡು ಬಂದಿದ್ದರು. 2004ರಲ್ಲಿ ತಾಲೂಕಿನ ದೌರ್ಭಾಗ್ಯ ಎಂಬಂತೆ ಸಿಂಹಗಳ ರಾಜಕಾರಣದ ಮುಂದೆ ಒಂದು ಗುಳ್ಳೇನರಿ ಬಂದುನಿಂತಿತು. ಅದು ರಾಜಕಾರಣದ ವಾತಾವರಣವನ್ನೇ ಹದಗೆಡಿಸಿತು ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್ ಅವರ ಕುರಿತು ವ್ಯಂಗ್ಯವಾಡಿದರು.
ಫೇಸ್ಬುಕ್ನಲ್ಲಿ ಶರತ್ ಬಚ್ಚೇಗೌಡ ಹೇಳಿಕೆಗೆ ಎಂಟಿಬಿ ತಿರುಗೇಟು:
ಶರತ್ ಬಚ್ಚೇಗೌಡ ಅವರ ಹೇಳಿಕೆಗೆ ಎಂಟಿಬಿ ನಾಗರಾಜ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ. ಹುಲಿ, ಸಿಂಹಗಳ ಮಧ್ಯೆ ಗುಳ್ಳೇನರಿ ಬಂದಿದ್ದಕ್ಕೇ ಹೊಸಕೋಟೆ ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಅನರ್ಹ ಶಾಸಕ ಬರೆದುಕೊಂಡಿದ್ದಾರೆ.