ಬೆಂಗಳೂರು: ಪರಿಷತ್ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್. ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ನಾಳೆ ರಾಜ್ಯಪಾಲರಿಗೆ ಈ ಮೂವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಎಐಸಿಸಿಯಿಂದ ಮೂವರ ಹೆಸರನ್ನು ಅಂತಿಮಗೊಳಿಸಿದೆ. ಈ ಮುಂಚೆ ಕೇಳಲ್ಪಟ್ಟಿದ್ದ ಮನ್ಸೂರ್ ಖಾನ್ ಹೆಸರು ಕೈ ಬಿಡಲಾಗಿದೆ.
ಇದೀಗ ಮೂವರ ಹೆಸರನ್ನು ನಾಮನಿರ್ದೇಶನಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಗೋಚರಿಸಿದೆ. ಈ ಮುಂಚೆ ಎಂ.ಆರ್. ಸೀತಾರಾಮ್, ಸುಧಾಂ ದಾಸ್ ಹಾಗೂ ಮನ್ಸೂರ್ ಖಾನ್ ಹೆಸರನ್ನು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು.
ರಾಜ್ಯಪಾಲರಿಗೆ ಬಂದಿದ್ದ ದೂರು: ಇತ್ತ ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ಎಂಬವರು ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು.
ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಸುಧಾಂ ದಾಸ್, ಶಿಕ್ಷಣ ಕ್ಷೇತ್ರದಲ್ಲಿ ಎಂ.ಆರ್. ಸೀತಾರಾಮ್ ಮತ್ತು ಸಹಕಾರ ಕ್ಷೇತ್ರದಿಂದ ಮನ್ಸೂರ್ ಖಾನ್ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 29ಕ್ಕೆ ಮೂವರ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಮೂವರ ಬಗ್ಗೆನೂ ಪಕ್ಷದಲ್ಲೂ ಅಸಮಾಧಾನ ವ್ಯಕ್ತವಾಗಿತ್ತು.
ಇದೀಗ ಹೈಕಮಾಂಡ್ ಮನ್ಸೂರ್ ಖಾನ್ ಬದಲಿಗೆ ಕಲಾವಿದೆ ಕೋಟಾದಲ್ಲಿ ನಟಿ ಉಮಾಶ್ರೀ ಹೆಸರನ್ನು ಅಂತಿಮಗೊಳಿಸಿದೆ. ಇತ್ತ ಮನ್ಸೂರ್ ಖಾನ್ ನಾಮನಿರ್ದೇಶನಕ್ಕೆ ಸಿಎಂ ಸಿದ್ದರಾಮಯ್ಯ ಒಲವು ಹೊಂದಿಲ್ಲ ಎನ್ನಲಾಗಿತ್ತು. ಕಾಂಗ್ರೆಸ್ ಹಿರಿಯ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ನಾಮನಿರ್ದೇಶನಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಒಲವು ಹೊಂದಿಲ್ಲ ಎನ್ನಲಾಗಿದೆ. ಅವರ ಬದಲು ಉಮಾಶ್ರೀ ಹೆಸರನ್ನು ಶಿಫಾರಸು ಮಾಡಲು ಒಲವು ಹೊಂದಿದ್ದರು.
ಮನ್ಸೂರ್ ಖಾನ್ ಬದಲಿಗೆ ಉಮಾಶ್ರೀ ನಾಮನಿರ್ದೇಶನಕ್ಕೆ ಒಲವು ಹೊಂದಿರುವ ಬಗ್ಗೆ ಕೈ ಮುಸ್ಲಿಂ ನಾಯಕರು ಅಸಮಾಧಾನಗೊಂಡಿದ್ದರು. ಸಿಎಂ ತೀರ್ಮಾನಕ್ಕೆ ಕಾಂಗ್ರೆಸ್ ಪಕ್ಕದಲ್ಲಿಯೇ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮೂವರು ಹೆಸರನ್ನು ಫೈನಲ್ ಮಾಡಿರುವ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆ ಇದೆ. ಎಂ.ಆರ್. ಸೀತಾರಾಂ, ಸುಧಾಂ ದಾಸ್ ಹಾಗೂ ಮಾಜಿ ಸಚಿವೆ ಉಮಾಶ್ರೀ ಹೆಸರಿನ ಪಟ್ಟಿಯನ್ನು ಬುಧವಾರ ರಾಜ್ಯಪಾಲರಿಗೆ ರವಾನೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Flower Show: ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ; ₹4 ಕೋಟಿಗೂ ಹೆಚ್ಚು ಹಣ ಸಂಗ್ರಹ