ಬೆಂಗಳೂರು : 77ನೇ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ ನಗರದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಿಗೆ ಎರಡು ಸುಸಜ್ಜಿತ ಆಂಬ್ಯುಲೆನ್ಸ್‌ಗಳನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಒದಗಿಸಿದರು. ಆಂಬ್ಯುಲೆನ್ಸ್ ಹಸ್ತಾಂತರ ಕಾರ್ಯವನ್ನು ಸಂಸದರ ಕಚೇರಿ ಸಿಬ್ಬಂದಿ ಇಂದು ನೆರವೇರಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ , ಶಿಕ್ಷಣ ಕ್ಷೇತ್ರದ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆದ್ಯತೆಯ ಮೇರೆಗೆ ನಿಧಿ ಬಳಕೆ ಮಾಡಲಾಗಿದೆ.
ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ, ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಪ್ರತಿ ನಿತ್ಯ ಕಾರ್ಯ ನಿರ್ವಹಿಸುವ 2 ಮೊಬೈಲ್ ಕ್ಲಿನಿಕ್ಗಳು ಈಗಾಗಲೇ ಸೇವೆಯಲ್ಲಿ ನಿರತವಾಗಿದೆ.
ಇದರ ಜೊತೆಗೆ, ಉಚಿತ ಆರೋಗ್ಯ ಚೆಕ್ ಅಪ್, ವೈದ್ಯರೊಂದಿಗೆ ಸಮಾಲೋಚನೆ, ಲ್ಯಾಬ್ ಟೆಸ್ಟ್‌ಗಳು, ಸಾಮಾನ್ಯ ಕಾಯಿಲೆಗಳಿಗೆ ಔಷಧಿ ಪೂರೈಕೆ ಸೇವೆ ಕೂಡ ಒದಗಿಸಲಾಗುತ್ತಿದ್ದು, 2 ಹೈಟೆಕ್, ಸುಸಜ್ಜಿತ ಅಂಬ್ಯುಲೆನ್ಸ್ /ಮೊಬೈಲ್ ಕ್ಲಿನಿಕ್ಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಸದರ ಕಚೇರಿ ತಿಳಿಸಿದೆ.
ಆರೋಗ್ಯ ಸೇವೆ ಸುಧಾರಣೆ ಮಾಡುವ ನಿಟ್ಟಿನಲ್ಲಿ, ಸಂಸದರ ನಿಧಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಸಹಕಾರದೊಂದಿಗೆ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ನರೇಂದ್ರ ಮೋದಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. ಸಂಪೂರ್ಣ ಉಚಿತ ಸೇವೆ ನೀಡಲು ನಮೋ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗಿದೆ. ಕ್ಷೇತ್ರದ ಮೂಡಲಪಾಳ್ಯದಲ್ಲಿ ಎರಡು ಅನಿಮಲ್ ಆಂಬ್ಯುಲೆನ್ಸ್ಗಳಿಗೆ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲಿಯೇ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : Selfie Spot: ಮೈಸೂರು ರೈಲ್ವೆ ನಿಲ್ದಾಣದಲ್ಲಿ 'ಸೆಲ್ಫಿ ಸ್ಪಾಟ್' ಉದ್ಘಾಟಿಸಿದ ಪ್ರತಾಪ್ ಸಿಂಹ