ಬೆಂಗಳೂರು : ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಬಳಿ ವ್ಹೀಲ್ ಚೇರ್ ಸ್ನೇಹಿ ವಿಶ್ರಾಂತಿ ತಾಣವನ್ನು ಸಂಸದ ತೇಜಸ್ವೀ ಸೂರ್ಯ ಅನಾವರಣಗೊಳಿಸಿದರು. ಆನ್ ಲೈನ್ ಫುಡ್ ಡೆಲಿವರಿ ಕೆಲಸಗಾರರಿಗೆ ಈ ರೀತಿಯ ಸೌಲಭ್ಯ ಒದಗಿಸಿರುವ ದೇಶದ ಪ್ರಥಮ ಪಾಯಿಂಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.
ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಚಾರ್ಜಿಂಗ್ ಪಾಯಿಂಟ್, ಆರಾಮದಾಯಕ ಸೀಟಿಂಗ್ ಸೌಲಭ್ಯ, ಟಾಯ್ಲೆಟ್, ನೀರಿನ ಸೌಲಭ್ಯ ಇಲ್ಲಿ ಒದಗಿಸಲಾಗಿದೆ. ಫುಡ್ ಡೆಲಿವರಿ ಕೆಲಸಗಾರರಿಗೆ ವಿರಾಮ ತೆಗೆದುಕೊಳ್ಳಲು ಇದನ್ನು ನಿರ್ಮಿಸಲಾಗಿದೆ. ವ್ಹೀಲ್ ಚೇರ್ ಸ್ನೇಹಿ ತಾಣವಾಗಿ ಇದನ್ನು ಮಾರ್ಪಡಿಸಲಾಗಿದೆ.

ಬೆಂಗಳೂರು ದಕ್ಷಿಣ ಸಂಸದರ ಕಚೇರಿ, ಝೊಮ್ಯಾಟೊ ಸಂಸ್ಥೆ ಸಹಯೋಗದಲ್ಲಿ ರೆಸ್ಟಿಂಗ್ ಪಾಯಿಂಟ್ ನಿರ್ಮಿಸಲಾಗಿದ್ದು, ದೇಶಾದ್ಯಂತ ಝೊಮ್ಯಾಟೊ ಕಂಪನಿಯಲ್ಲಿ 200 ಕ್ಕೂ ಅಧಿಕ ವ್ಹೀಲ್ ಚೇರ್ ಡೆಲಿವರಿ ಪಾರ್ಟ್ನರ್ಗಳಿದ್ದು, 100 ರಷ್ಟು ಜನ ನಮ್ಮ ಬೆಂಗಳೂರಿನಲ್ಲಿಯೇ ಇದ್ದಾರೆ. ಇವರೆಲ್ಲರಿಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ನಿಯೋ ಮೋಷನ್ ಸಂಸ್ಥೆ ನಿರ್ಮಾಣ ಮಾಡಿರುವುದು ವಿಶೇಷ.
ವ್ಹೀಲ್ ಚೇರ್ ಸ್ನೇಹಿ ರೆರ್ಸ್ಟಿಂಗ್ ಪಾಯಿಂಟ್ ಅನ್ನು ಇತರ 20 ಜನ ವಿಕಲ ಚೇತನರೊಂದಿಗೆ ಲೋಕಾರ್ಪಣೆಸಿದ ಸಂಸದ ಸೂರ್ಯ ಮಾತನಾಡಿ, ಎಷ್ಟೋ ಬಾರಿ ನಾವು ಆನ್ ಲೈನ್ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಬೆಂಗಳೂರಿನ ಟ್ರಾಫಿಕ್, ಮಳೆ, ಹವಾಮಾನ ವೈಪರಿತ್ಯಗಳ ನಡುವೆಯೂ ಗ್ರಾಹಕರಿಗೆ ಸಕಾಲದಲ್ಲಿ ತಲುಪಿಸುವ ಫುಡ್ ಡೆಲಿವರಿ ಕೆಲಸಗಾರರ ಕಾರ್ಯ ಶ್ಲಾಘನೀಯ. ಎಲೆಕ್ಟ್ರಿಕ್ ವ್ಹೀಲ್ ಚೇರ್ ಮೂಲಕ ತೆರಳಿ, ಆರ್ಡರ್ ಅನ್ನು ಪಡೆದು ಗ್ರಾಹಕರಿಗೆ ತಲುಪಿಸುವ ಕಾರ್ಯ ನಿರ್ವಹಿಸುವ ಎಷ್ಟೋ ಕೆಲಸಗಾರರು ನಿಜಕ್ಕೂ ನಮ್ಮೆಲ್ಲರಿಗೆ ಸ್ಫೂರ್ತಿ. ಇಂತಹವರಿಗೆ ವಿರಾಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ. ಈ ಕಾರ್ಯದಲ್ಲಿ ನಮ್ಮೊಂದಿಗೆ ಸಹಯೋಗ ನೀಡಿರುವ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಧರ್ಮೇಶ್, 15 ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾದ ನಾನು ವ್ಹೀಲ್ ಚೇರ್ ಬಳಸಿ ತಿರುಗಾಡುತ್ತಿದ್ದು, ನನ್ನಂಥವರನ್ನು ಝೊಮ್ಯಾಟೊ ಸಂಸ್ಥೆ ಕೆಲಸ ನೀಡಿದ್ದು, ಪ್ರತೀ ದಿನ 20 ರಷ್ಟು ವಿತರಣೆಗಳನ್ನು ಮಾಡುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಯಾವುದಾದರೂ ಹೋಟೆಲ್, ಟಾಯ್ಲೆಟ್ ಬಳಿ ನಮ್ಮ ವಾಹನ ನಿಲ್ಲಿಸಿ ವಿರಾಮ ಪಡೆಯುವುದು ತ್ರಾಸದಾಯಕವಾಗಿದ್ದು, ಇಂತಹ ಪಾಯಿಂಟ್ಗಳ ನಿರ್ಮಾಣದಿಂದ ನನ್ನಂಥ ಹಲವಾರು ಫುಡ್ ಡೆಲಿವರಿ ಕೆಲಸಗಾರರಿಗೆ ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜ್ ಮಾಡಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : 4 ಸಾವಿರ ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲು ಕ್ರಮ: ಸಿಎಂ ಸಿದ್ದರಾಮಯ್ಯ