ಬೆಂಗಳೂರು: ಪಕ್ಷದ ವಿರುದ್ಧ, ನಾಯಕತ್ವದ ವಿರುದ್ಧ ಮಾತನಾಡುವವರ ಬಗ್ಗೆ ಹೈಕಮಾಂಡ್ಗೆ ದೂರು ನೀಡಲು ದೆಹಲಿಗೆ ಶಾಸಕರ ನಿಯೋಗ ಕೊಂಡೊಯ್ಯುವ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗ್ಗೆ, ನಾಯಕರ ಬಗ್ಗೆ ಲಘುವಾಗಿ ಮಾತನಾಡುವವರನ್ನು ಕೇಂದ್ರದ ನಾಯಕರು ಗಮನಿಸುತ್ತಾರೆ. ಯಾರೆಲ್ಲಾ ಮಾತನಾಡುತ್ತಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಕೇಂದ್ರದ ಬಳಿ ನಿಯೋಗ ಕೊಂಡ್ಯೊಯ್ಯಬೇಕೇ, ಬೇಡವೇ? ಎಂಬುದನ್ನು ಚರ್ಚಿಸುತ್ತೇವೆ ಎಂದರು.
ಕೇಂದ್ರ ಸರ್ಕಾರದಲ್ಲಿ ನಮ್ಮ ರಾಜ್ಯಕ್ಕೆ ಬಂಪರ್ ಕೊಡುಗೆ ಸಿಕ್ಕಿದೆ. ಇದನ್ನು ಸ್ವಾಗತ ಮಾಡುತ್ತೇವೆ. ಸಾಮಾಜಿಕ ನ್ಯಾಯ, ಪ್ರಾದೇಶಿಕವಾಗಿ ಸಮತೋಲನ ಕಾಪಾಡಿಕೊಂಡ ಮೋದಿ, ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಂಪುಟದಿಂದ ಹೊರಬಿದ್ದಿರುವ ಡಿ.ವಿ.ಸದಾನಂದಗೌಡರು ರಾಜ್ಯ ರಾಜಕಾರಣದತ್ತ ಬರುತ್ತಾರೆ ಎಂಬ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ನಾನು ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಮಾತನ್ನಾಡುವವಷ್ಟು ದೊಡ್ಡವನಲ್ಲ. ನನ್ನ ಕ್ಷೇತ್ರದ ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ. ಕೋವಿಡ್-19 ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ. ಇಂದಿನ ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ. ಈ ರಾಜಕಾರಣವೇ ಬೇಡ ಎನಿಸಿದೆ. ಅಷ್ಟು ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.