ಬೆಂಗಳೂರು: ಬಿಟ್ಟಿ ಪ್ರಚಾರಕ್ಕಾಗಿ ರಾಜ್ಯ ಸರ್ಕಾರವನ್ನು ಟೀಕಿಸಲಾಗುತ್ತಿದ್ದು, ಸಿಎಂ ರಾಜೀನಾಮೆ ಕೇಳುವ ಬದಲು ಸರ್ಕಾರಕ್ಕೆ ಸಲಹೆ ನೀಡಿ. ರಾಜಕೀಯ ಮಾಡುವ ಸಮಯ ಇದಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈ ವರ್ಷ 2ನೇ ಅಲೆ ಬಂದಿದೆ. ಕಳೆದ ವರ್ಷ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡಲಾಗಿತ್ತು. ಈ ಬಾರಿ ನೌಕರರ ವೇತನದಲ್ಲಿ ಕಡಿತ ಮಾಡಿಲ್ಲ. ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಹಿಂದೆ ಪರಿಹಾರ ಕೊಟ್ಟಿತ್ತು. ಕೋವಿಡ್ ಬಂದರೂ ಅಭಿವೃದ್ಧಿಗೆ ಹಿನ್ನಡೆ ಆಗಿಲ್ಲ. ಕ್ಷೇತ್ರಗಳ ಅಭಿವೃದ್ಧಿಗೂ ಹಣ ಕೊಟ್ಟಿದ್ದಾರೆ. ಬಿಟ್ಟಿ ಪ್ರಚಾರಕ್ಕಾಗಿ ಮಾತನಾಡುವುದು ಸರಿಯಲ್ಲ. ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕರು ಟೀಕೆ ಮಾಡುವುದು ಬೇಡ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೋವಿಡ್ ನಿಯಂತ್ರಣಕ್ಕೆ ಸಿಎಂ ಎಲ್ಲ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಆದರೂ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಸಲಹೆ ಕೊಡಲಿ, ಅದನ್ನು ಬಿಟ್ಟು ಸಿಎಂ ರಾಜೀನಾಮೆ ಕೇಳುವುದು ಸರಿಯಲ್ಲ. ರಾಜಕಾರಣ ಇಂತಹ ಸಂದರ್ಭದಲ್ಲಿ ಮಾಡುವುದು ಬೇಡ. ಅದರ ಬದಲು ಸಲಹೆ ಕೊಡಲಿ. ಚುನಾವಣೆ ಬಂದಾಗ ರಾಜಕೀಯ ಮಾಡಲಿ. ಈಗ ರಾಜಕೀಯ ಬೇಡ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೇಂದ್ರದ ನಾಯಕರನ್ನು ಭೇಟಿ ಮಾಡಿದ್ದು ಕೋವಿಡ್ ವಿಚಾರಕ್ಕಾಗಿ ಮಾತ್ರ. ರಾಜ್ಯದ ಕೋವಿಡ್ ನಿರ್ವಹಣೆ ಬಗ್ಗೆ ಕೇಂದ್ರಕ್ಕೆ ತೃಪ್ತಿ ಇದೆ. ನಾಯಕತ್ವ ಬದಲಾವಣೆ ಆಗುತ್ತದೆ ಅನ್ನೋದೆಲ್ಲ ಸತ್ಯಕ್ಕೆ ದೂರವಾದ ವಿಷಯ. ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸಿಎಂ ಪ್ರಯತ್ನ ಪಡುತ್ತಿದ್ದಾರೆ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.
ದೆಹಲಿಗೆ ಹೋಗಿ ದೂರು ಕೊಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಚಿವರಾದವರು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡಬೇಕು. ಅದನ್ನು ಬಿಟ್ಟು ರಾಜಕೀಯ ಮಾಡೋದಲ್ಲ. ದೂರು ಕೊಡುವುದರಿಂದ ಏನೂ ಪ್ರಯೋಜನ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್ಗೆ ಟಾಂಗ್ ನೀಡಿದರು.
ಜಿಂದಾಲ್ಗೆ ಭೂಮಿ ಕೊಡೋ ನಿರ್ಧಾರ ಸಂಪುಟ ಸಭೆಯಲ್ಲಿ ಕೈಗೊಂಡಿದ್ದು, ಸಿಎಂ ಸಾಧಕ-ಬಾಧಕ ನೋಡಿಯೇ ತೀರ್ಮಾನ ಕೈಗೊಂಡಿರುತ್ತಾರೆ. ಇದರ ಬಗ್ಗೆ ಸಿಎಂಗೆ ಕೆಲವರು ಪತ್ರ ಬರೆದಿದ್ದಾರೆ. ಪತ್ರ ಬರೆದವರ ಜೊತೆಯೂ ಮಾತನಾಡಿದ್ದೇವೆ ಎಂದರು.
ಇದನ್ನೂ ಓದಿ: ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ, ಎಲ್ಲ ಅರ್ಹರಿಗೂ ವ್ಯಾಕ್ಸಿನ್ ಹಾಕಿಸಿ: ಸಿದ್ದರಾಮಯ್ಯ