ಬೆಂಗಳೂರು : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಅಭಿವೃದ್ಧಿ ಅಸಾಧ್ಯ, ನಮಗೆ ಶೇಕಡಾ 16 ರಷ್ಟು ಮೀಸಲಾತಿ ಬೇಕು ಎಂದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಮ್ಮತಿ ವಿಚಾರವಾಗಿ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಒಂದೂಕಾಲು ಕೋಟಿ ನಮ್ಮ ಲಿಂಗಾಯತರಿದ್ದಾರೆ. ಲಿಂಗಾಯತರಲ್ಲೂ ಬಡವರಿದ್ದಾರೆ. ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕಿದೆ. ಮಹಾರಾಷ್ಟ್ರದಲ್ಲಿ ಮರಾಠರಿಗೆ ಶೇ.16 ಮೀಸಲಾತಿಯಿದೆ. ರಾಜ್ಯದಲ್ಲಿ ನಮ್ಮ ಜನಸಂಖ್ಯೆಯೂ ಹೆಚ್ಚಿದೆ. ಅದಕ್ಕಾಗಿ ಲಿಂಗಾಯಿತರಿಗೆ ಶೇ.16 ಮೀಸಲಾತಿ ನೀಡಲಿ. ಇದು ಸರ್ಕಾರಕ್ಕೆ ನಮ್ಮ ಒತ್ತಾಯ ಎಂದಿದ್ದಾರೆ.
ಬೇರೆ ಬೇರೆ ನಿಮಗಕ್ಕೆ 50 ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ, ನಮ್ಮ ಸಮುದಾಯಕ್ಕೆ ನೆರವು ಹೆಚ್ಚಿಡಬೇಕು. ನಿಗಮ ಮಾಡೋದ್ರಿಂದ ಪ್ರಯೋಜನವಿಲ್ಲ. ಒಬ್ಬ ವಿದ್ಯಾರ್ಥಿಯ ಸಿಇಟಿ ಪೀಜ್ಗೂ ಆಗಲ್ಲ. ಕೊಡುವ ನೆರವು ಅಷ್ಟಿರುತ್ತದೆ. ಕನಿಷ್ಠ ಮೂರ್ನಾಲ್ಕು ಸಾವಿರ ಕೋಟಿ ಮೀಸಲಿಡಬೇಕು. ಹೊರಟ್ಟಿಯವರು ಇದರ ಚಾರ್ಟ್ ಕಳಿಸಿದ್ದಾರೆ. ನಿಗಮದಿಂದ ಸಮಾಜಕ್ಕೆ ಪ್ರಯೋಜನವಿಲ್ಲ. ದೊಡ್ಡ ಮಟ್ಟದ ಅನುದಾನ ಕೊಟ್ಟರೆ ಸ್ವಾಗತ ಮಾಡುತ್ತೇನೆ ಎಂದರು.
ನೂರಿನ್ನೂರು ಕೋಟಿ ಸಾಲುವುದಿಲ್ಲ:
ನಿಗಮಕ್ಕೆ ನೂರು, ಇನ್ನೂರು ಕೋಟಿ ನೀಡಿದ್ರೆ ಪ್ರಯೋಜನವೇ ಇಲ್ಲ. ನಾನು ಸಮುದಾಯದ ಪ್ರತಿನಿಧಿಯಾಗಿ ಹೇಳುವೆ. ಯಾವುದೋ ಪಕ್ಷದ ಪ್ರತಿನಿಧಿಯಾಗಿ ಕೇಳುತ್ತಿಲ್ಲ. ನಿಗಮವನ್ನ ನೀವು ಮಾಡಿದ್ದೀರ. ಹೆಚ್ಚಿನ ಅನುದಾನ ಕೊಟ್ಟರೆ ನಾನು ಸ್ವಾಗತ ಮಾಡುವೆ. ಕಡಿಮೆ ಅನುದಾನ ಕೊಟ್ಟರೆ ಅಸಮಾಧಾನವಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಒಬಿಸಿಗೆ ನಮ್ಮ ಸಮುದಾಯವನ್ನ ಸೇರಿಸಬೇಕು ಎಂದರು.
ಬೇರೆ ಪಕ್ಷದವರನ್ನು ಸಂಪರ್ಕಿಸಿಲ್ಲ:
ತಾವು ಬಿಜೆಪಿ ಸೇರ್ಪಡೆ ವದಂತಿ ವಿಚಾರ ಮಾತನಾಡಿ, ಬೇರೆ ಪಕ್ಷದವರು ನನ್ನನ್ನ ಸಂಪರ್ಕಿಸಿಲ್ಲ. ನಾನು ಯಾರನ್ನೂ ಸಂಪರ್ಕಿಸಿಲ್ಲ. ಬೇರೆ ಪಕ್ಷದವರು ಸಂಪರ್ಕಿಸಿದ್ದರು ಅಂತ ಹೇಳಲಿ. ಕಾಂಗ್ರೆಸ್ ನನ್ನ ಪಕ್ಷ. ಆಗಲೂ ಇದ್ದೇನೆ, ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ನಾನು ಬಿಜೆಪಿಗೆ ಹೋಗ್ತೇನೆ ಅನ್ನೋದು ಸುಳ್ಳು. ಬಿಎಸ್ವೈ ನಂತರ ಸಮುದಾಯದ ನಾಯಕರಾರು ಎಂಬ ವಿಚಾರವಾಗಿ ಈಗಲೇ ಚರ್ಚೆ ಬೇಕಿಲ್ಲ. ಸಮುದಾಯದಲ್ಲಿ ಯಡಿಯೂರಪ್ಪ ಇದ್ದಾರೆ. ಇನ್ನೂ ನೂರು ವರ್ಷ ಅವರು ಇರಬೇಕು. ಅಂತಹ ಸಮಯ ಬಂದಾಗ ನೋಡೋಣ. ಕಾಂಗ್ರೆಸ್ನಲ್ಲಿ ನಾನಿದ್ದೇನೆ, ಜೆಡಿಎಸ್, ಬಿಜೆಪಿಯಲ್ಲೂ ಇದ್ದಾರೆ. ನಾವು ಲಿಂಗಾಯತ ನಾಯಕ ಅಂತ ಘೋಷಣೆ ಮಾಡೋಕೆ ಆಗುತ್ತಾ? ಅದನ್ನ ಸಮಾಜ ಒಪ್ಪಬೇಕು. ಜನ ಒಪ್ಪಿದರೆ ಮಾತ್ರ ಅದಕ್ಕೆ ವ್ಯಾಲ್ಯೂ ಬರುತ್ತದೆ ಎಂದರು.