ಬೆಂಗಳೂರು: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ ಹಾಗು ಲೋಕಸಭೆ ಸದಸ್ಯ ಕಾರ್ತಿ ಚಿದಂಬರಂ ಅವರಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಯಶಸ್ವಿಯಾಗಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಕೆಶಿಗೆ ಇದೇ ಸಂದರ್ಭದಲ್ಲಿ ಕಾರ್ತಿ ಅಭಿನಂದಿಸಿದರು. ತಮಿಳುನಾಡು ಹಾಗೂ ಕರ್ನಾಟಕ ರಾಜ್ಯ ರಾಜಕೀಯದ ವಿಚಾರವಾಗಿ ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದರು.
ವಿವಿಧ ಮುಖಂಡರನ್ನು ಭೇಟಿಯಾಗಿ ಚರ್ಚಿಸುವುದಕ್ಕೂ ಮುನ್ನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, "ಸರ್ಕಾರದಿಂದ ಯಾರಿಗೆ ಒಂದು ರೂಪಾಯಿ ಹಣ ಕೊಟ್ಟರೂ ಅದಕ್ಕೆ ಲೆಕ್ಕ, ಹೊಣೆಗಾರಿಕೆ ಇರಬೇಕು. ಫಲಾನುಭವಿ ಆಗುವವರು ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹೊಂದಿರಬೇಕು. ಬೇರೆಯವರ ಬ್ಯಾಂಕ್ ಖಾತೆಗೆ ಹಣ ನೀಡಲಾಗುವುದಿಲ್ಲ. ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು. ಅವರ ಮನೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಮತದಾರರ ಗುರುತಿನಿ ಚೀಟಿ, ಎಪಿಎಲ್, ಬಿಪಿಎಲ್ ಕಾರ್ಡ್‌ಗಳಲ್ಲಿ ಯಾವ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂದು ಮಾಹಿತಿ ಇದೆ" ಎಂದರು.
"ಬಿಜೆಪಿ, ಜನತಾ ದಳದವರಿಗೆ ಈ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನಮ್ಮ ಯೋಜನೆ ಬಗ್ಗೆ ಮಾತನಾಡುವವರು ಮೊದಲು ಬಿಜೆಪಿಯವರ ಉದ್ಯೋಗ ಭರವಸೆ ಬಗ್ಗೆ ಮಾತಾಡಲಿ. ಎಲ್ಲರ ಖಾತೆಗೆ 15 ಲಕ್ಷ ಹಾಕಿಸಲಿ. ಆ ಬಗ್ಗೆ ಯಾಕೆ ಯಾರೂ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ" ಎಂದು ಪ್ರಶ್ನಿಸಿದರು.
ತೆರಿಗೆ ಪಾವತಿದಾರರು ನಿಮಗೆ ಮತ ಹಾಕಿಲ್ಲವೇ ಎಂದು ಕೇಳಿದಾಗ, "ನಾವು ಬಡವರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ. ತೆರಿಗೆ, ಜಿಎಸ್ಟಿ ಪಾವತಿದಾರರು ಈ ಯೋಜನೆ ಬೇಕು ಎಂದು ಕೇಳುತ್ತಿಲ್ಲ. ಅನೇಕರು ಈ ಯೋಜನೆ ಬೇಡ ಎಂದು ನಮಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಗ್ಯಾರಂಟಿ ವಿಚಾರದಲ್ಲಿ ಬಾಡಿಗೆ ಮನೆಯವರ ಬಗ್ಗೆ ಅಧಿಕಾರಿಗಳು ಒಂದು ಆಯಾಮ ನೀಡಿದ್ದರು. ಆದರೆ ನಾವು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ" ಎಂದು ಹೇಳಿದರು.
ಡಿಕೆಶಿ ಇಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಹಾಗೂ ಗೋವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯೂರಿ ಅಲೆಮಾವೋ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ದೆಹಲಿಯ ಪಿಟಿಐ ಹಿರಿಯ ಸಂಪಾದಕ ಸುಧಾಕರ್ ನಾಯಕ್, ಬಿಡಿಎ ಮಾಜಿ ಅಧ್ಯಕ್ಷ ಜೈಕರ್ ಜೆರೋಮ್, ಮಾಜಿ ಸಂಸದ ಜೈಪ್ರಕಾಶ್ ಹೆಗ್ಡೆ, ಕೆಎಎಸ್ ಅಧಿಕಾರಿಗಳ ಸಂಘದ ಸದಸ್ಯರನ್ನು ಭೇಟಿಯಾಗಿ ಸಮಾಲೋಚಿಸಲಿದ್ದಾರೆ. ಈ ಎಲ್ಲ ಸಭೆಗಳು ಕುಮಾರಕೃಪಾ ಅತಿಥಿ ಗೃಹದಲ್ಲಿಯೇ ನಡೆಯಲಿದೆ.
ಇದನ್ನೂ ಓದಿ: ಉಚಿತ ವಿದ್ಯುತ್ ಯೋಜನೆ : ಸಾಧಕ ಬಾಧಕಗಳ ಕುರಿತು ಬೆಸ್ಕಾಂ ಅಧಿಕಾರಿಗಳ ಜೊತೆ ಇಂಧನ ಸಚಿವ ಜಾರ್ಜ್ ಸಭೆ