ರಾಜ್ಯದ ಕೋವಿಡ್ ಪರಿಸ್ಥಿತಿ ವಿಶ್ಲೇಷಿಸಿ ಪ್ರಧಾನಿಗೆ ಪತ್ರ ಬರೆದ ಸಂಸದ ಡಿಕೆ ಸುರೇಶ್ - ಬೆಂಗಳೂರು
ರಾಜ್ಯದಲ್ಲಿ ಕೋವಿಡ್ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಈ ಸಂದರ್ಭ ಕೇಂದ್ರ ಸರ್ಕಾರ ಕೈಕಟ್ಟಿ ಕೂರದೇ ರಾಜ್ಯದ ಸಹಾಯಕ್ಕೆ ಮುಂದಾಗಬೇಕು ಎಂದು ಸಂಸದ ಡಿ.ಕೆ. ಸುರೇಶ್ ಒತ್ತಾಯಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಬಿಕ್ಕಟ್ಟು ಹೆಚ್ಚುತ್ತಿದ್ದು ಕೂಡಲೇ ಅಗತ್ಯ ಪೂರೈಸುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಸಂಸದ ಡಿ.ಕೆ. ಸುರೇಶ್ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎರಡು ಪ್ರತ್ಯೇಕ ಪತ್ರ ಬರೆದು ಮನವಿ ಮಾಡಿರುವ ಸುರೇಶ್, ರಾಜ್ಯದಲ್ಲಿ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಕೋವಿಡ್ ಎರಡನೇ ಅಲೆ ಸಾಕಷ್ಟು ಸಂಕಷ್ಟ ತಂದಿಡುತ್ತಿದ್ದು, ಸಾವಿರಾರು ಮಂದಿ ಅಗತ್ಯ ವೈದ್ಯಕೀಯ ಸೌಕರ್ಯ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಈ ಸಂದರ್ಭ ಕೇಂದ್ರ ಸರ್ಕಾರ ಕೈಕಟ್ಟಿ ಕೂರದೇ ರಾಜ್ಯದ ಸಹಾಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲ ಪತ್ರದಲ್ಲಿ ಅವರು ರಾಜ್ಯದ ಕೋವಿಡ್ ಪರಿಸ್ಥಿತಿ ವಿವರಿಸಿದ್ದು, ಕರ್ನಾಟಕದಲ್ಲಿ ಪ್ರಸ್ತುತ ಕೋವಿಡ್ ಬಿಕ್ಕಟ್ಟು ಮತ್ತು ಎರಡನೇ ಅಲೆಯನ್ನ ಎದುರಿಸಲು ಅಗತ್ಯವಾದ ತುರ್ತು ಪರಿಹಾರಗಳನ್ನು ಒದಗಿಸಬೇಕು ಎಂದು ಸುದೀರ್ಘವಾಗಿ ವಿವರಿಸಿದ್ದಾರೆ. ಎರಡನೇ ಅಲೆಯನ್ನ ಎದುರಿಸಲಾಗದೆ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ಸಿಗದಿರುವುದು ಸಹ ಇದಕ್ಕೆ ಕಾರಣ. ಜನರ ಈ ಸಾವಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪತ್ರದಲ್ಲಿ ಆಮ್ಲಜನಕ ಕೊರತೆಯನ್ನು ಸವಿಸ್ತಾರವಾಗಿ ವಿವರಿಸಿರುವ ಡಿಕೆ ಸುರೇಶ್, ತಕ್ಷಣದ ಜಾರಿಗೆ ಬರುವಂತೆ ದೈನಂದಿನ ಆಮ್ಲಜನಕ ಕೋಟಾವನ್ನು 1200 ಮೆ.ಟನ್ ಗೆ ಹೆಚ್ಚಿಸಲು ಕರ್ನಾಟಕ ಹೈಕೋರ್ಟ್ ನಿರ್ದೇಶನವನ್ನು ಭಾರತ ಸರ್ಕಾರಕ್ಕೆ ನೀಡಿದೆ. ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ಪ್ರಮಾಣದ ಆಮ್ಲಜನಕ ಕೊರತೆ ಇದೆ. ರಾಜ್ಯದ ಅಗತ್ಯ ಪೂರೈಸುವ ಬದಲು ಕೇಂದ್ರ ಸರ್ಕಾರ ಹೈಕೋರ್ಟ್ ನಿರ್ದೇಶನಕ್ಕೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ರಾಜ್ಯದ ನ್ಯಾಯಯುತ ಬೇಡಿಕೆ ಈಡೇರಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಕೂಡಲೇ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಪೂರೈಸುವ ಮೂಲಕ ರಾಜ್ಯದಲ್ಲಿ ಹೆಚ್ಚಬಹುದಾದರೂ ಸಾವಿನ ಸಂಖ್ಯೆಗೆ ಕಡಿವಾಣ ಹಾಕಲು ಸಹಾಯ ಮಾಡುವಂತೆ ಪ್ರಧಾನಿಗೆ ಕೋರಿದ್ದಾರೆ.
ಓದಿ: 'ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಿ': ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್