ಬೆಂಗಳೂರು: ಕೊರೊನಾ ವಿಚಾರದಲ್ಲಿ ಜನರು ಸರ್ಕಾರವನ್ನು ನಂಬಿಕೊಂಡು ಕೂರುವಂತಿಲ್ಲ. ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ಕೊರೊನಾ ನಿಯಂತ್ರಣ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿನಗರ ವಲಯ ಸಭೆ ಬಳಿಕ ಮಾತನಾಡಿದ ಅವರು, ರಾಜರಾಜೇಶ್ವರಿನಗರ ವಲಯದಲ್ಲಿ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬುದರ ಕುರಿತು ಸಭೆ ನಡೆಯಿತು. ಅಧಿಕಾರಿಗಳು ಆ್ಯಕ್ಷನ್ ಪ್ಲಾನ್ ಹೇಳಿದ್ದಾರೆ. ಆದರೆ ಇದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ರೀತಿ ಆಗಿದೆ ಎಂದು ಇಂದಿನ ಸಭೆಯನ್ನೇ ಟೀಕಿಸಿದರು.
ಕಳೆದ ನಾಲ್ಕೂವರೆ ತಿಂಗಳಿನಿಂದ ಏನು ಮಾಡದೆ ಸುಳ್ಳು ಹೇಳಿಕೊಂಡು ತಿರುಗಾಡಿದ್ದಾರೆ. ಒಬ್ಬರಿಗೊಬ್ಬರಿಗೆ ಸಮನ್ವಯತೆಯೇ ಇಲ್ಲ. ಈಗ ವೈದ್ಯರನ್ನು ಹುಡುಕುತ್ತಿದ್ದಾರೆ. ಈಗ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡ್ತಾ ಇದ್ದಾರೆ. ಸಿಎಂ ಒಬ್ಬರೇ ಪ್ರಾಮಾಣಿಕರಾಗಿದ್ದರೆ ಉಳಿದವರು ಪ್ರಾಮಾಣಿಕರಾಗಿ ಇರಬೇಕಲ್ವಾ ಎಂದು ಪ್ರಶ್ನಿಸಿದರು. ಬರೀ ಸಿಎಂ ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಸಚಿವರು ಹಾಗು ಅಧಿಕಾರಿಗಳೂ ಕೆಲಸ ಮಾಡಬೇಕು ಎಂದರು.
ಬೆಂಗಳೂರಿನ ಜನ ಅವರ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಸರ್ಕಾರ ನಂಬಿಕೊಂಡರೆ ಆಗುವುದಿಲ್ಲ. ನೀವು ಹೇಳುವ ಪರಿಸ್ಥಿತಿ ಇಲ್ಲವೆಂದು ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದೇನೆ. ವೈದ್ಯರು, ನರ್ಸ್ ಗಳ ಕೊರತೆ ಇದೆ. ಕೋವಿಡ್ ಡೆತ್ ರೇಟ್ ಜಾಸ್ತಿ ಆಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು.