ಬೆಂಗಳೂರು: "ಬಿ.ಎಲ್.ಸಂತೋಷ್ ಹೇಳಿದ್ದಕ್ಕಿಂತ ನಮ್ಮ ಸಂಪರ್ಕದಲ್ಲಿ ಹೆಚ್ಚಿನ ಜನ ಇದ್ದಾರೆ" ಎಂದು ಸಂಸದ ಡಿ.ಕೆ.ಸುರೇಶ್ ಹೊಸ ಬಾಂಬ್ ಸಿಡಿಸಿದರು. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಕೂಡ ಬಿಜೆಪಿ ತೊರೆಯಲ್ಲ, ಆದರೆ ಕಾಂಗ್ರೆಸ್ನ 40 ರಿಂದ 45 ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಸಭೆಯಲ್ಲಿ ಬಿ.ಎಲ್.ಸಂತೋಷ್ ಅವರ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿದ ಸ್ಥಾನ ಗೆಲ್ಲುತ್ತದೆನ್ನುವ ವಿಚಾರವಾಗಿ ಮಾತನಾಡಿ, "ಚುನಾವಣೆ ನಡೆಯಲಿ ಆಗ ನೋಡೋಣ" ಎಂದರು. ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸಿ, "ಕಾವೇರಿ ಪ್ರಾಧಿಕಾರ 5,000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಹೇಳಿದೆ. ರಾಜ್ಯದ ರೈತರಿಗೆ ಅನ್ಯಾಯವಾಗುವ ತೀರ್ಮಾನವಾಗಿದೆ. ಸರ್ಕಾರ ರೈತರ ಹಾಗೂ ಕರ್ನಾಟಕದ ರಕ್ಷಣೆ ಮಾಡಬೇಕು ಎಂದು ನಾನೂ ಕೂಡ ದನಿ ಎತ್ತುತ್ತೇನೆ. ನೀರಿಲ್ಲ, ಮಳೆ ಇಲ್ಲ ರೈತರ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದಷ್ಟು ಜರೂರಾಗಿ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಪಿಟಿಷನ್ ಹಾಕಿ ಅದಕ್ಕೆ ತಡೆ ತರಬೇಕು ಎಂಬುದು ನನ್ನ ಒತ್ತಾಯ" ಎಂದರು.
ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡಿದ ಅವರು, "ವಿಶೇಷ ಅಧಿವೇಶನ ಕರೆದಿದ್ದಾರೆ. ಅದರ ಕಾರ್ಯಸೂಚಿ ಗೊತ್ತಿಲ್ಲ. ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಅದರ ಬಗ್ಗೆ ಯಾವ ರೀತಿ ಚರ್ಚೆ ಮಾಡುತ್ತಾರೆ ಎಂಬುದನ್ನು ನೋಡಬೇಕು" ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ, ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನೂ ಇಲ್ಲ: ಯತ್ನಾಳ್
ಬಿ.ಲ್.ಸಂತೋಷ್ ಹೇಳಿದ್ದೇನು?: ಇತ್ತೀಚಿಗೆ ನಡೆದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮತದಾರ ಚೇತನ ಮಹಾಭಿಯಾನದ ನಿಮಿತ್ತ ನಡೆದಿದ್ದ ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಾಗಾರದ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮಾತನಾಡಿ, "ಆಪರೇಷನ್ ಹಸ್ತಕ್ಕೆ ಯಾರೂ ಚಿಂತಿಸಬೇಕಿಲ್ಲ. ಅಂತಹ ವಿದ್ಯಮಾನ ನಡೆಯುತ್ತಿಲ್ಲ, ವಾಸ್ತವವೇ ಬೇರೆ ಇದೆ, ಬಿಜೆಪಿಯಿಂದ ಯಾರೂ ಕಾಂಗ್ರೆಸ್ನತ್ತ ಹೋಗುತ್ತಿಲ್ಲ" ಎಂದಿದ್ದರು.
"ಇನ್ನು ಮೂಲ ಬಿಜೆಪಿಗರು ವಲಸಿಗ ಬಿಜೆಪಿಗರು ಎನ್ನುವ ಚರ್ಚೆ ಮಾಡಬೇಡಿ, ಅದು ಸರಿಯಲ್ಲ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಪದೇ ಪದೇ ಚರ್ಚಿಸಿದರೆ ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು? ಇದೆಲ್ಲಾ ಚರ್ಚೆ ಅನಗತ್ಯ, ಯಾರೂ ಪಕ್ಷ ಬಿಡಲ್ಲ, ಅದರ ಚಿಂತೆ ಬಿಡಿ. ಹಾಗೆ ನೋಡಿದರೆ ನನ್ನ ಜೊತೆಗೆ 40-45 ಕಾಂಗ್ರೆಸ್ನ ಮುಖಂಡರು ಸಂಪರ್ಕದಲ್ಲಿದ್ದಾರೆ. ವರಿಷ್ಠರು ಒಪ್ಪಿದರೆ ಒಂದೇ ದಿನದಲ್ಲಿ ಅವರನ್ನೆಲ್ಲಾ ಕರೆತರಬಲ್ಲೆ. ಆದರೆ ಅದರ ಅಗತ್ಯ ನಮಗಿಲ್ಲ. ಹಾಗಾಗಿ ಆಪರೇಷನ್ ಹಸ್ತ, ಪ್ರತಿಪಕ್ಷ ನಾಯಕರ, ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಬಿಟ್ಟು ಲೋಕಸಭೆ ಚುನಾವಣೆಗೆ ಬೇಕಾದ ಸಿದ್ಧತೆಯತ್ತ ಗಮನ ಹರಿಸಿ" ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದರು.