ಬೆಂಗಳೂರು: ರಾಜ್ಯ ಸರ್ಕಾರದ ಹಲವು ಅಕ್ರಮಗಳ ವಿರುದ್ಧ ದಾಖಲೆ ಸಮೇತ ಲೋಕಾಯುಕ್ತರಿಗೆ ದೂರು ನೀಡಲು ಸಂಸದ ಡಿ ಕೆ ಸುರೇಶ್ ಆಗಮಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಇಂದು ಲೋಕಾಯುಕ್ತ ನ್ಯಾ. ಪಿ ವಿಶ್ವನಾಥ ಶೆಟ್ಟಿ ಅವರನ್ನು ಭೇಟಿ ಮಾಡಿ, ಕೆಲವು ಅಕ್ರಮಗಳ ಸಂಬಂಧ ದಾಖಲೆ ಸಮೇತ ದೂರು ನೀಡಿದ್ದಾರೆ. ಈಗಾಗಲೇ ಲೋಕಾಯುಕ್ತ ಕಚೇರಿಗೆ ಆಗಮಿಸಿರುವ ಡಿ ಕೆ ಸುರೇಶ್ ದೂರು ಸಲ್ಲಿಕೆ ನಂತರ ಅಕ್ರಮಗಳ ಕುರಿತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ ನಾಯಕರು ಇದುವರೆಗೂ ನಿರಂತರವಾಗಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈಯುತ್ತ ಬಂದಿದ್ದರು. ಇದೀಗ ರಾಜ್ಯವನ್ನು ಪ್ರತಿನಿಧಿಸುವ ಏಕೈಕ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ದಾಖಲೆ ಸಮೇತ ಲೋಕಾಯುಕ್ತರ ಬಳಿ ತೆರಳಿರುವುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಅದಕ್ಕೆ ಪರ್ಯಾಯವಾಗಿ ಎಸಿಬಿ ರಚನೆ ಮಾಡಲಾಗಿದೆ. ಈ ಮಾಹಿತಿ ಇದ್ದು ಸುರೇಶ್ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡುತ್ತಿರುವುದು ಕುತೂಹಲ ಕೆರಳಿಸಿದೆ.
ಎಸಿಬಿ ಸದ್ಯ ರಾಜ್ಯ ಸರ್ಕಾರದ ಹಿಡಿತದಲ್ಲಿರುವ ಹಿನ್ನೆಲೆ ನ್ಯಾಯ ಸಿಗುವ ವಿಶ್ವಾಸ ಇಲ್ಲದ ಕಾರಣ ಈ ಹೆಜ್ಜೆ ಇಟ್ಟಿರಬಹುದು ಎಂದು ಹೇಳಲಾಗ್ತಿದೆ.