ಬೆಂಗಳೂರು: ಪಾದರಾಯನಪುರದಲ್ಲಿ ಕೋವಿಡ್ ಸೋಕಿತರನ್ನ ಕ್ವಾರಂಟೈನ್ ಗೆ ಒಳಪಡಿಸಲು ಮುಂದಾಗಿದ್ದ ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಸದ್ಯ 59 ಕ್ಕೂ ಹೆಚ್ವು ಜನರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದ್ರೆ ಓರ್ವ ಬಂಧಿತನ ತಾಯಿ ಜೆ ಜೆ ಆರ್ ನಗರ ಪೊಲೀಸ್ ಠಾಣೆ ಎದುರು ಎದೆ ಬಡಿದುಕೊಂಡು ಗೋಳಾಟ ನಡೆಸಿದ್ದಾರೆ.
ನನ್ನ ಮಗನನ್ನು ತನಿಖೆ ಮಾಡಿ ಕಳಿಸಿ, ಅವನನ್ನು ಔಷಧಿ ತರಲು ಕಳುಹಿಸಿದ್ದೆ. ಆದರೆ ಸುಖಾ ಸುಮ್ಮನೆ ಪೊಲೀಸ್ ಠಾಣೆಗೆ ಎಳೆದುತರಲಾಗಿದೆ. ನನ್ನ ಮಗ ಅಮಾಯಕ ಬಿಟ್ಟು ಬಿಡಿ ಸಾರ್ ಎಂದು ಆರೋಪಿಯ ತಾಯಿ ತಡರಾತ್ರಿ ಗೋಳಾಟ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ಯಾರನ್ನು ಬಿಡಲು ಸಾಧ್ಯವಿಲ್ಲವೆಂದು ಪೊಲೀಸರು ಖಡಕ್ ಆಗಿಯೇ ಹೇಳಿ ಕಳಿಸಿದ್ದಾರೆ.
ರಾತ್ರಿ ಠಾಣೆಗೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ 59 ಬಂಧಿತರಲ್ಲಿ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಯಾವುದಕ್ಕಾಗಿ ಗಲಭೆ ಮಾಡಿದ್ದಾರೆ, ಈ ಗಲಭೆಯಲ್ಲಿ ಬೇರೆ ಯಾರ ಪಾತ್ರ ಇದೆ ಅನ್ನೋದರ ಕುರಿತು ತನಿಖೆ ಮಾಡುತ್ತಿದ್ದಾರೆ. ಹಾಗೆ ಉಳಿದವರನ್ನ ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಗಲಾಟೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.