ಬೆಂಗಳೂರು: ಕೋವಿಡ್ ಸೋಂಕು ಹರಡಲು ಪ್ರಾರಂಭವಾದ ನಂತರ ನಗರ ಆರೋಗ್ಯ ಕೇಂದ್ರಗಳ ಪರಿಸ್ಥಿತಿಯೇ ಬದಲಾಗಿದೆ. ವೈದ್ಯಕೀಯ ಪರೀಕ್ಷೆಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿಯಾದ ಕಾರಣ ಹೆಚ್ಚಿನ ಜನರು ನಗರ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. ಇನ್ನೂ ಕೇಂದ್ರ ಸರ್ಕಾರದ ಇ- ಸಂಜೀವಿನಿ ಮೂಲಕ ಟೆಲಿಮೆಡಿಸನ್ ಸೇವೆ ಲಭ್ಯವಿದೆಯೇ ಹೊರತು ರಾಜ್ಯ ಸರ್ಕಾರ ಈ ಕುರಿತು ಯೋಜನೆ ಪರಿಚಯಿಸಿಲ್ಲ.
ನಗರ ಆರೋಗ್ಯ ಕೇಂದ್ರದಲ್ಲಿ ಪಬ್ಲಿಕ್ ಹೆಲ್ತ್ ಆಫೀಸರ್, ಮೂವರು ಸಹಾಯಕ ಸಿಬ್ಬಂದಿ, ಒಬ್ಬರು ಶುಶ್ರೂಷಕರು, ಒಬ್ಬರು ಲ್ಯಾಬ್ ಟೆಕ್ನಿಯನ್, ಮೆಡಿಕಲ್ ಆಫೀಸರ್ ಸೇರಿದಂತೆ 16 ಮಂದಿ ಕರ್ತವ್ಯ ನಿರ್ವಹಿಸುತ್ತಾರೆ. ಜನಸಂಖ್ಯಾ ಆಧಾರದ ಮೇಲೆ ನಗರ ಆರೋಗ್ಯ ಕೇಂದ್ರಗಳು ಇರಲಿವೆ. ನಗರ ಆರೋಗ್ಯ ಕೇಂದ್ರದಲ್ಲಿ ಸ್ಪೆಷಲಿಸ್ಟ್ ಒಪಿಡಿ ಕೇರ್, ಆ್ಯಂಟಿ ರೇಬೀಸ್ ವ್ಯಾಕ್ಸಿನೇಷನ್, ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಾದ ಡಯಾಬಿಟಿಸ್, ಹೈ ಬಿಪಿ, ಲೋ ಬಿಪಿ ಸೇರಿದಂತೆ ಪರೀಕ್ಷೆಗಳು ಹಾಗೂ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ. ಸಾಂಕ್ರಾಮಿಕ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಇ- ಸಂಜೀವಿನಿ ಬಳಕೆ:
ನಗರ ಆರೋಗ್ಯ ಕೇಂದ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಟೆಲಿಮೆಡಿಸನ್ನಂತಹ ಸೇವೆಯನ್ನು ಆರಂಭಿಸಿಲ್ಲ. ಬದಲಿಗೆ ಭಾರತ ಸರ್ಕಾರದ ಪ್ರಮುಖ ಟೆಲಿಮೆಡಿಸನ್ ಸಮಾಲೋಚನೆ ಇ- ಸಂಜೀವಿನಿ ಬಳಕೆಯಲ್ಲಿದೆ. ಇ- ಸಂಜೀವಿನಿ ಮೂಲಕವೇ ರೋಗಿಗಳು ಆರೋಗ್ಯ ಸೇವೆ ಪಡೆಯುತ್ತಿದ್ದಾರೆ.
ಈ ಸಂಬಂಧ ಬೆಂಗಳೂರಿನ ಡಿಹೆಚ್ಒ ಡಾ. ಗೋಳೂರು ಶ್ರೀನಿವಾಸ್ ಮಾಹಿತಿ ನೀಡಿದ್ದು, ನಗರ ಆರೋಗ್ಯ ಕೇಂದ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಟೆಲಿಮೆಡಿಸನ್ ಪರಿಚಿಯಿಸಿಲ್ಲ. ಆದರೆ ಟಿಲಿ ಮೆಡಿಸನ್ ಸಂಬಂಧ ಕೇಂದ್ರದ ಇ-ಸಂಜೀವಿನಿ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ರೋಗಿಗಳು ವೀಡಿಯೋ ಕಾಲ್ ಮೂಲಕ ತಜ್ಞ ವೈದ್ಯರನ್ನು ಸಂಪರ್ಕ ಮಾಡಬಹುದು. ಅವರು ಸೂಚಿಸಿದ ಔಷಧಗಳನ್ನು ನಗರ ಆರೋಗ್ಯ ಕೇಂದ್ರ ಅಥವಾ ಔಷಧ ಮಳಿಗೆಯಲ್ಲಿ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಟೆಲಿಮೆಡಿಸನ್ ಆರಂಭಿಸಲು ಚಿಂತನೆ:
ತಾಲೂಕು ಮಟ್ಟದಲ್ಲಿರುವ ಆಸ್ಪತ್ರೆಯಲ್ಲೂ ಟೆಲಿಮೆಡಿಸನ್ ಆರಂಭವಾಗುತ್ತಿದ್ದು, ಸದ್ಯಕ್ಕೆ ಬೆಂಗಳೂರಿನಲ್ಲಿರುವ ಯಾವ ತಾಲೂಕು ಆಸ್ಪತ್ರೆಯಲ್ಲೂ ಟೆಲಿಮೆಡಿಸನ್ ಇಲ್ಲ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಶುರುವಾಗಲಿದೆ ಎಂದು ತಿಳಿಸಿದರು.
ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ ಬಳಕೆ ಹೆಚ್ಚಳ:
ಕೊರೊನಾ ಸೋಂಕು ಎಲ್ಲೆಡೆ ಆವರಿಸಿಕೊಂಡಾಗ ನಗರ ಆರೋಗ್ಯ ಕೇಂದ್ರ ಸೇರಿದಂತೆ ಇತರ ಯಾವುದೇ ಆಸ್ಪತ್ರೆಗಳಿಗೆ ಬರುವುದನ್ನು ಜನರು ನಿಲ್ಲಿಸಿದ್ದರು. ಹಾಗೇ ಆಸ್ಪತ್ರೆಗಳಲ್ಲೂ ಅನಿರ್ವಾಯ, ಗಂಭೀರ ಪರಿಸ್ಥಿತಿ ಇದ್ದರಷ್ಟೇ ಆಸ್ಪತ್ರೆಗೆ ಭೇಟಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು. ಹೀಗಾಗಿ ಜನರಿಗೆ ಸಣ್ಣ-ಪುಟ್ಟ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಮನೆಯಲ್ಲಿ ಇದ್ದುಕೊಂಡು ತಜ್ಞರ ಬಳಿ ಸಲಹೆ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಅದುವೇ ಇ-ಸಂಜಿವಿನಿ ಟೆಲಿ ಮೆಡಿಸಿನ್ ಸೇವೆ. ಕೇಂದ್ರ ಸರ್ಕಾರದ ಇ ಸಂಜೀವಿನಿ ಸೇವೆಯು ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟ್ ನಿಂದಲೂ ಜನರು ವೈದ್ಯರೊಂದಿಗೆ ಫೋನ್ ಕಾಲ್ ಮೂಲಕ ಸಲಹೆ ಪಡೆಯುವ ವ್ಯವಸ್ಥೆ ಆಗಿದೆ. ಟೆಲಿ ಮೆಡಿಸಿನ್ ಸೇವೆಯನ್ನು ಲಕ್ಷಾಂತರ ಜನರು ಬಳಸಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಹದಗೆಟ್ಟಿವೆ ಅದೆಷ್ಟೋ ರಸ್ತೆಗಳು: ಹೆಸರಿಗಷ್ಟೇನಾ ಸ್ಮಾರ್ಟ್ ಸಿಟಿ?
ರಾಜ್ಯದಿಂದ ಆಪ್ತಮಿತ್ರ ಆರೋಗ್ಯ ಸಹಾಯ ವಾಣಿಗೆ(14410) ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕರೆ ಬರುತ್ತಿದ್ದು, ಮಾರ್ಚ್ 28 ರಂದು 4,653 ಜನರ ಕರೆ ಸ್ವೀಕರಿಸಲಾಗಿದೆ. Esanjeevaniopd.in ಡೌನ್ ಲೋಡ್ ಮಾಡಿಕೊಂಡು ಸೋಮವಾರದಿಂದ ಮಂಗಳವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವೈದ್ಯರನ್ನ ಸಂಪರ್ಕಿಸಬಹುದಾಗಿದೆ. ಈ ವರೆಗೆ ಒಟ್ಟು 7,07,196 ಜನರು ಟೆಲಿಮೆಡಿಸನ್ ಸೇವೆ ಬಳಸಿದ್ದಾರೆ ಎಂದು ತಿಳಿದು ಬಂದಿದೆ.