ಬೆಂಗಳೂರು : "ಬಹುತೇಕ ಅಪಘಾತಗಳಲ್ಲಿ ಸಾವನ್ನಪ್ಪುವವರು ಮುಖ್ಯವಾಗಿ ಹೆಲ್ಮೆಟ್ ಧರಿಸಿರುವುದಿಲ್ಲ ಮತ್ತು ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಹಾಕಿರುವುದಿಲ್ಲ" ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತಿಳಿಸಿದರು.
ಭಾನುವಾರ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರಿನ ಸುವರ್ಣ ಮಹೋತ್ಸವದ ಅಂಗವಾಗಿ ನಗರದ ಟ್ರಸ್ ವೆಲ್ ಆಸ್ಪತ್ರೆಯ ಆವರಣದಿಂದ ರಸ್ತೆ ಸುರಕ್ಷತೆ ಸಾರುವ ಬೈಕಥಾನ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ಇತ್ತೀಚಿನ ಅಧ್ಯಯನದ ಪ್ರಕಾರ, ಅಪಘಾತಗಳಲ್ಲಿ ಸೂಕ್ತ ಶಿಕ್ಷಣ ಪಡೆಯದವರು ಸಾವನ್ನಪ್ಪುತ್ತಿದ್ದಾರೆ. ಬಹುತೇಕ ಮಂದಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತ್ರ ಪೂರ್ಣಗೊಳಿಸಿರುವುದು ಕಂಡು ಬಂದಿದೆ. ಹೀಗಾಗಿ ಶಾಲಾ ಹಂತದಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸಬೇಕು. ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮೊಬೈಲ್ ಬಳಸಬಾರದು" ಎಂದು ಅವರು ಸೂಚನೆ ನೀಡಿದರು.
ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಮಾತನಾಡಿ, "ನಮ್ಮ ತಂಡ ವಿಶ್ವಕಪ್ ಕ್ರಿಕೆಟ್ ಜಯಗಳಿಸಿದಾಗ ಸುರಕ್ಷತೆಗಾಗಿ ಹೆಲ್ಮೆಟ್ ಇರಲಿಲ್ಲ. ಆದರೆ ಈಗ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಲಾಗುತ್ತಿದೆ. ವಿದ್ಯಾರ್ಥಿಗಳು, ಯುವ ಸಮೂಹ ವೇಗದ ರೋಚಕತೆಗೊಳಗಾಗಿ ಜೀವ ಕಳೆದುಕೊಳ್ಳಬಾರದು. ತಮ್ಮ ಜೀವ ರಕ್ಷಣೆಯ ಜತೆಗೆ ಮತ್ತೊಬ್ಬರ ಸುರಕ್ಷತೆಗೂ ಒತ್ತು ನೀಡುವುದು ಮಾನವೀಯ ಧರ್ಮ" ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಚಿಕ್ಕಮಗಳೂರು: ಸಾವಿರಾರು ಹಾಫ್ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು ಪೊಲೀಸರು
ಇದೇ ವೇಳೆ ಬೈಕರ್‌ಗಳು ಟೌನ್ ಹಾಲ್, ಮೇಖ್ರಿ ವೃತ್ತದ ಮೂಲಕ ದೇವನಹಳ್ಳಿ ಟೋಲ್ ಪ್ಲಾಜಾ, ಚಿಕ್ಕಬಳ್ಳಾಪುರದ ಗುಡಿಬಂಡೆಯ ಫಾರಂಹೌಸ್‌ವರೆಗೆ 100 ಕಿ.ಮೀ ಜಾಥಾ ನಡೆಸಿದರು. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಶಿಸ್ತುಬದ್ಧವಾಗಿ ವಾಹನ ಚಲಾಯಿಸಿದರು.
ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ವೆಂಕಟೇಶ್, ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ವಿ.ಮಧುಸೂದನ್, ಗಾಯಕ ವಾಸು ದೀಕ್ಷಿತ್ ಸೇರಿದಂತೆ 200 ಕ್ಕೂ ಹೆಚ್ಚು ಉತ್ಸಾಹಿ ಸರ್ಜನ್ಗಳು, ವೈದ್ಯರು ಬೈಕ್ ರೈಡ್‌ನಲ್ಲಿ ಭಾಗವಹಿಸಿ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದರು.
ಮೈಸೂರು ಜಿಲ್ಲೆಯಲ್ಲಿನ ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಕೂಡ ದ್ವಿಚಕ್ರ ವಾಹನ ಬಳಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೇ ಇದಲ್ಲಿ ಕಾಲೇಜಿನ ಆವರಣದೊಳಗೆ ಪ್ರವೇಶ ನಿರ್ಬಂಧಿಸಿ ಆಡಳಿತ ವರ್ಗವು ಕಾನೂನುಬದ್ದವಾಗಿ ಕ್ರಮ ಕೈಗೊಂಡು ಕಡ್ಡಾಯ ಹೆಲ್ಮೆಟ್ ನೀತಿ ಅನುಸರಿವಂತೆ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕು ಎಂದು ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದರು.
ಇದನ್ನೂ ಓದಿ : ಕಾಲೇಜು ಕ್ಯಾಂಪಸ್‌ನಲ್ಲಿಯೂ ಸಹ ಹೆಲ್ಮೆಟ್ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ