ಬೆಂಗಳೂರು: ಇತ್ತೀಚೆಗೆ ರಾಜಕೀಯ ದ್ವೇಷದಿಂದಲೇ ಅತಿ ಹೆಚ್ಚು ಹತ್ಯೆಗಳು ನಡೆಯುತ್ತಿವೆ. ತನ್ನ ದಾರಿಗೆ ಅಡ್ಡಿ ಎಂಬ ಕಾರಣಕ್ಕಾಗಿ ಹತ್ಯೆ ನಡೆಯುತ್ತಿರುವುದು ಅತ್ಯಂತ ಆಘಾತಕಾರಿ ಬೆಳವಳಣಿಗೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೊಲೆ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ಧ ಪೀಠ, ರಾಜಕೀಯ ಕಾರಣಗಳಿಗೆ ಹತ್ಯೆ ನಡೆಯುತ್ತಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಈ ವೇಳೆ ಮಧ್ಯಪ್ರವೇಶಿಸಿದ ಆರೋಪಿ ಪರ ವಕೀಲರು, ಅರ್ಜಿದಾರರು ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಅರ್ಜಿದಾರರನ್ನು ಅನಗತ್ಯವಾಗಿ ಬಂಧಿಸಿಡಲಾಗಿದೆ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮೈಸೂರು: ಅನಿಲ ಬಳಕೆ ಮಾಡದೆ ಹಾಗೇ ಇಟ್ಟಿದ್ದೇ ಕ್ಲೋರಿನ್ ಸೋರಿಕೆಗೆ ಕಾರಣ?
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ರೀ, ವಕೀಲರೇ ಸುಖಾಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಹಾಗೆ ಬಂಧಿಸಿದರೆ ಅದು ಅಕ್ರಮ ಬಂಧನವಾಗುತ್ತದೆ. ಈ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ನಾವು ಎಷ್ಟೇ ಪ್ರಯತ್ನಿಸಿದರೂ ಬದುಕಿಸಲಾಗದು. ಇತ್ತೀಚೆಗೆ ಹೆಚ್ಚು ಕೊಲೆಗಳು ನಡೆಯುತ್ತಿರುವುದೇ ಮೂರು ಕಾರಣಗಳಿಗೆ. ಅನೈತಿಕ ಸಂಬಂಧ, ಯಾವುದಾದರೂ ಲಾಭಕ್ಕಾಗಿ, ಇಲ್ಲವೇ ರಾಜಕೀಯ ದ್ವೇಷಕ್ಕೆ. ಈ ಕಾರಣ ಇರದಿದ್ದರೆ ಅಷ್ಟು ಸುಲಭದಲ್ಲಿ ಹತ್ಯೆಗಳು ನಡೆಯುವುದಿಲ್ಲ.
ಓರ್ವ ವ್ಯಕ್ತಿ ತನ್ನ ಬೆಳವಣಿಗೆಗೆ ಅಡ್ಡಿಯಾಗಿದ್ದಾನೆ. ಆತನನ್ನು ಮುಗಿಸಿದರೆ ಸರಿಹೋಗುತ್ತದೆ ಎಂಬ ಕಾರಣ ಬಂದರೆ ಸಾಕು, ಕೊಲೆಗಳು ನಡೆದು ಹೋಗುತ್ತವೆ. ಜೈಲಿನಿಂದ ಬಂದ ನಂತರವೂ ನನ್ನ ಎದುರುಹಾಕಿಕೊಂಡವನ ಕಥೆ ಏನಾಯಿತು ನೋಡು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಈ ಕಾರಣಕ್ಕೆ ಗ್ರಾಮ ಪಂಚಾಯಿತಿ ಹಂತದಲ್ಲಿ ರಾಜಕೀಯ ಪಕ್ಷಗಳನ್ನು ಹೊರಗಿಡಲಾಗಿದೆ. ಹಾಗಿದ್ದೂ, ಇಂದು ಗ್ರಾಮಗಳಲ್ಲಿ ರಾಜಕೀಯ ದ್ವೇಷ ಹೆಚ್ಚುತ್ತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.