ಬೆಂಗಳೂರು: ಪೇಜಾವರ ಶ್ರೀಗಳ ಪಾರ್ಥಿವ ಶರೀರ ನಗರದ ನ್ಯಾಷನಲ್ ಕಾಲೇಜು ಮೈದಾನ ತಲುಪಿದೆ.
ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಪಾರ್ಥಿವ ಶರೀರ ನ್ಯಾಷನಲ್ ಕಾಲೇಜು ಮೈದಾನ ತಲುಪಿದ್ದು, ಒಂದುವರೆ ಘಂಟೆಗಳ ಕಾಲ ಭಕ್ತರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಅಂತಿಮ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿದೆ. ಸುಗಮ ದರ್ಶನಕ್ಕಾಗಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಹರ ಸಾಹಸ ನಡೆಸುತ್ತಿದ್ದು, ನಿಗದಿತ ಸಮಯದೊಳಗೆ ಅಂತಿಮ ದರ್ಶನ ಕಾರ್ಯ ಮುಗಿಸಿ ಶ್ರೀಗಳ ಪಾರ್ಥಿವ ಶರೀರ ನಗರದ ವಿದ್ಯಾಪೀಠದಲ್ಲಿ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.
ಶ್ರೀಗಳ ಅಂತಿಮ ಇಚ್ಛೆಯಂತೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಇಲ್ಲಿ ಅಂತ್ಯಸಂಸ್ಕಾರ ನಡೆಸಲು ನಂದಾವನ ನಿರ್ಮಿಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ ನಿಧನರಾದ ಶ್ರೀಗಳ ಪಾರ್ಥಿವ ಶರೀರವನ್ನು 2 ಗಂಟೆ ಕಾಲ ಉಡುಪಿಯಲ್ಲಿ ಭಕ್ತಾದಿಗಳ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ತದನಂತರ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗಿದೆ. ಸದ್ಯ ಎಚ್ಎಎಲ್ ವಿಮಾನ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರ ತಲುಪಿದ್ದು, ಸಾರ್ವಜನಿಕ ದರ್ಶನ ನಡೆಯುತ್ತಿದೆ.