ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಹತ್ತು ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತರುವುದಾಗಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಹೆಚ್.ಎಂ.ರಮೇಶಗೌಡ ಹಾಗೂ ರಘು ಆಚಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರವಾಸೋದ್ಯಮ ಇಲಾಖೆಯ ಮೇಲೆ ಜನತೆ ಬಹಳ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಪ್ರವಾಸಿಗರ ನಿರೀಕ್ಷೆಗೆ ತಕ್ಕಂತೆ ಅವರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಹೆಚ್ಚು ಹಣವನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಿ, ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದರು.
ನಂದಿ ಬೆಟ್ಟಕ್ಕೆ ರೋಪ್-ವೇ 320 ಕಿ.ಮೀ ಉದ್ದದ ಕಡಲ ತೀರಕ್ಕೆ ಹಲವಾರು ಯೋಜನೆಗಳು, ಹೆಲಿ ಟೂರಿಸಂ ಸೇರಿದಂತೆ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವುದಾಗಿ ಸಚಿವ ಯೋಗೇಶ್ವರ ಭರವಸೆ ನೀಡಿದರು.
ಚನ್ನರಾಯಪಟ್ಟಣದ ನಂದಿನಿ ಹೈ-ಟೆಕ್ ಘಟಕ ಡೈರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಫೆಬ್ರುವರಿಯಲ್ಲಿ ತಪಾಸಣೆ ಮಾಡಿದೆ. ಈ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡಿದೆ. ಬಾಯ್ಲರ್ನಿಂದ ಉತ್ಪತ್ತಿಯಾಗುವ ಬೂದಿಯನ್ನು ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ. ರೈತರಿಗೆ ವಿತರಿಸಲಾಗುತ್ತಿದೆ ಎಂದು ಎಂ.ಎ.ಗೋಪಾಲಸ್ವಾಮಿಯವರ ಪ್ರಶ್ನೆಗೆ ಸಚಿವ ಯೋಗೀಶ್ವರ್ ಉತ್ತರಿಸಿದ್ದಾರೆ.
ಓದಿ:ಸದನದಲ್ಲಿ ಸಿದ್ದರಾಮಯ್ಯರಿಂದ ಸಿಡಿ 'ಸೌಂಡ್'ಆಯ್ತು.. ಬೊಮ್ಮಾಯಿ 'ಮ್ಯೂಟ್' ಮಾಡಲು ಯತ್ನ!
ಈ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯ ಇತರೆ ರಾಸಾಯನಿಕಗಳು, ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೇ ಕೆರೆಗಳಿಗೆ ಹಾಗೂ ಹಳ್ಳ-ಕೊಳ್ಳಗಳಿಗೆ ಹರಿಸುತ್ತಿರುವ ಬಗ್ಗೆ ಯಾವುದೇ ರೀತಿ ದೂರುಗಳು ಬಂದಿಲ್ಲ. ಮುಂದಿನ ತಿಂಗಳು ತಾವೇ ಖುದ್ದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆಗೆ ಹಾಸನ ಜಿಲ್ಲೆಗೆ ಹಾಗೂ ಚನ್ನರಾಯಪಟ್ಟಣದ ನಂದಿನಿ ಹೈಟೆಕ್ ಘಟಕಕ್ಕೆ ಭೇಟಿ ನೀಡುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.