ಬೆಂಗಳೂರು: ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಅಗತ್ಯ ಕೌಶಲ್ಯಗಳಿರುವ ಪರಿಣತರ ಕೊರತೆ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿದ್ದು, ಈ ಕೊರತೆ ತುಂಬಿಕೊಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ. ಕೌಶಲ್ಯ ಹಾಗೂ ದತ್ತಾಂಶದ ದೃಷ್ಟಿಯಿಂದ ಭಾರತ ಜಗತ್ತಿನಲ್ಲೇ ಸಮೃದ್ಧ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ಮೆಕಿನ್ಸೆ ಸಂಸ್ಥೆಯ ಹಿರಿಯ ಪಾಲುದಾರ ನೋಶಿರ್ ಕಾಕಾ ಅಭಿಪ್ರಾಯಪಟ್ಟರು.
ಇಂದು “ಬೆಂಗಳೂರು ತಂತ್ರಜ್ಞಾನ ಮೇಳ-2020” ರ 'ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನ' ಕುರಿತ ವಿಷಯ ಗೋಷ್ಠಿಯಲ್ಲಿ ಶುಕ್ರವಾರ ‘ಯುವರ್‌ಸ್ಟೋರಿ’ ಸಂಸ್ಥೆಯ ಸಿಇಓ ಶ್ರದ್ಧಾ ಶರ್ಮಾ ಜೊತೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಡೀ ವಿಶ್ವದ ಕೌಶಲ್ಯ ಕಾರ್ಖಾನೆಯಾಗುವ ಸಾಮರ್ಥ್ಯ ಭಾರತಕ್ಕಿದ್ದು, ಸದ್ಯದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೇವೆಗಳಲ್ಲಿ ಭಾರತ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ.
2025ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯ ಒಟ್ಟು ಮೌಲ್ಯ 5 ಟ್ರಿಲಿಯನ್ ಡಾಲರ್ ತಲುಪುವಂತೆ ಮಾಡುವಲ್ಲಿ ಈ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ. ಆ ವೇಳೆಗೆ ಭಾರತದ ನಿರೀಕ್ಷಿತ ಜಿಡಿಪಿ ಹೆಚ್ಚಳದಲ್ಲಿ ತಂತ್ರಜ್ಞಾನದ ಕೊಡುಗೆ ಶೇ.10ಕ್ಕಿಂತ (ಸುಮಾರು 500 ಬಿಲಿಯನ್ ಡಾಲರ್) ಹೆಚ್ಚಿರಲಿದೆ.
ಚಿಲ್ಲರೆ ವಹಿವಾಟು, ಕೃಷಿ, ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ದೂರಸಂಪರ್ಕ ಸೇರಿದಂತೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯಲ್ಲೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದ್ದು, ಕೃಷಿ ಕ್ಷೇತ್ರ ಒಂದರಿಂದಲೇ ನಾವು ಭಾರತದ ಜಿಡಿಪಿಗೆ 60-65 ಬಿಲಿಯನ್ ಡಾಲರುಗಳ ಹೆಚ್ಚುವರಿ ಕೊಡುಗೆ ನಿರೀಕ್ಷಿಸಬಹುದಾಗಿದೆ ಎಂದರು.
ಸಮಾಜದ ಒಳಿತಿಗಾಗಿ ತಂತ್ರಜ್ಞಾನ ಏನೆಲ್ಲ ಕೊಡುಗೆ ನೀಡಬಹುದು ಎನ್ನುವುದು ಪ್ರಸ್ತುತ ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳ ಬೆಳವಣಿಗೆಯನ್ನು ನಾವು ಯೋಜಿಸಬೇಕಿದೆ.
ವಿಕೋಪ ಪರಿಹಾರ, ಮಾಲಿನ್ಯ ನಿಯಂತ್ರಣ, ನೀರಿನ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನವು ಎಲ್ಲರ ಒಳಿತಿಗಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ.
ಅರ್ಥವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೂ ತಂತ್ರಜ್ಞಾನದ ಅನುಕೂಲಗಳು ದೊರಕಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡ ಹಲವು ಉತ್ತಮ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಸೋಶಿಯಲ್ ಆಲ್ಫಾ ಸಂಸ್ಥೆಯ ಮನೋಜ್ ಕುಮಾರ್ ಮಾತನಾಡಿ, ಭಾರತದಲ್ಲಿ ಬೆಳೆಯುತ್ತಿರುವ ಸ್ಟಾರ್ಟಪ್ ವ್ಯವಸ್ಥೆಯು ಸಾಮಾಜಿಕ ಒಳಿತಿಗಾಗಿಯೂ ಕೆಲಸಮಾಡುತ್ತಿದೆ.
ಸರ್ಕಾರ ಹಾಗೂ ಸಮಾಜ ಸೇವಾ ಸಂಸ್ಥೆಗಳೊಂದಿಗೆ ನವೋದ್ಯಮಗಳ ಸಹಭಾಗಿತ್ವವು ನಮ್ಮ ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಹಲವು ಪರಿಹಾರಗಳನ್ನು ಒದಗಿಸಬಹುದು. ಇದನ್ನು ಸಾಧ್ಯವಾಗಿಸಲು ಕರ್ನಾಟಕದಲ್ಲಿ ಹಲವು ಪ್ರಯತ್ನಗಳು ನಡೆದಿರುವುದು ಶ್ಲಾಘನೀಯ ಎಂದರು.