ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನು ವಿಳಂಬ ಸರಿಯಲ್ಲ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಮಾಡಕೂಡದು. ವಿಳಂಬವಾದರೆ ಗೊಂದಲ ಹೆಚ್ಚಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದು, ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.
ಕೆಲಸ ಇಲ್ಲದ ನಾಯಕರಿಂದ ಬಣ ಸೃಷ್ಟಿ: ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ಬಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೂಲ-ವಲಸಿಗರು ಅನ್ನೋ ಭೇದವಿಲ್ಲ. ಮೂಲ ಕಾಂಗ್ರೆಸಿಗರು, ವಲಸಿಗರು ಎಂಬುದು ಕೆಲವರ ಸೃಷ್ಟಿ ಅಷ್ಟೇ ಎಂದು ಕಿಡಿ ಕಾರಿದರು.
ಕೆಲವು ನಾಯಕರಿಗೆ ಪ್ರಸ್ತಾಪ ಮಾಡುವುದಕ್ಕೆ ಬೇರೆ ವಿಚಾರ ಇಲ್ಲ. ಬೇರೆ ಯಾವುದೇ ವಿಚಾರಗಳಿಲ್ಲದ ಕಾರಣಕ್ಕೆ ಮೂಲ ವಲಸಿಗ ಎಂಬ ಗೊಂದಲ ಸೃಷ್ಟಿ ಮಾಡಿದ್ದಾರೆ. ನಮ್ಮ ಸಿದ್ದಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ನಮ್ಮವರೇ ಎಂದು ಸ್ಪಷ್ಟಪಡಿಸಿದರು.