ಬೆಂಗಳೂರು: ದೇಶದಲ್ಲಿ ಮುಂಗಾರು ಮಳೆ ಮುಗಿದು ಇಂದಿನಿಂದ ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಆರಂಭವಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಈಶಾನ್ಯ ಮಾರುತಗಳು ದಕ್ಷಿಣ ಭಾರತದ ರಾಜ್ಯಗಳತ್ತ ಬೀಸಿ ಮಳೆ ತರಲಿದ್ದು, ರಾಜ್ಯದಲ್ಲಿ ಐದು ದಿನಗಳ ಕಾಲ ವ್ಯಾಪಕ ಹಾಗೂ ಕೆಲವೆಡೆ ಭಾರೀ ಮಳೆಯಾಗಲಿದೆ. 18,19,20ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಯಲ್ಲೂ ವರುಣ ಅಬ್ಬರಲಿಸಲಿದ್ದಾನೆ.
ಬೆಂಗಳೂರಿನಲ್ಲಿ ರಾತ್ರಿ ವೇಳೆ ಸಾಧಾರಣ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ 18,19,20ನೇ ದಿನಾಂಕದಂದು ಎಲ್ಲೋ ಅಲರ್ಟ್ ನೀಡಲಾಗಿದೆಯೆಂದು ಬೆಂಗಳೂರು ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ತಿಳಿಸಿದರು.
ಈ ವರ್ಷ ಜೂನ್ 1ರಿಂದ ಸೆಪ್ಟೆಂಬರ್ 30 ರವರೆಗೆ ರಾಜ್ಯದಲ್ಲಿ ಶೇ.23ರಷ್ಟು ಹೆಚ್ಚುವರಿ ಮುಂಗಾರು ಮಳೆಯಾಗಿದೆ. ಇಂದಿನಿಂದ ನೈರುತ್ಯ ಮಾನ್ಸೂನ್ ದೇಶದಿಂದ ನಿರ್ಗಮನವಾಗಿದೆ. ಈಶಾನ್ಯ ಮಾರುತ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದು, ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ತಿಳಿಸಿದರು. ಜೊತೆಗೆ ಹಿಂಗಾರು ಮಳೆ ಡಿಸೆಂಬರ್ ತಿಂಗಳವರೆಗೂ ಇರಲಿದೆ. ಡಿಸೆಂಬರ್ ಮೊದಲನೇ ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಸಿಎಸ್ ಪಾಟೀಲ್ ತಿಳಿಸಿದರು.