ಬೆಂಗಳೂರು : ರಾಜ್ಯದ ನೆರೆ ಹಾನಿಗೆ ಸ್ಪಂದಿಸಿ ಪರಿಹಾರ ನೀಡುವಂತೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಹಣ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತವರು ಜಿಲ್ಲೆ ಶಿವಮೊಗ್ಗ ಪ್ರವಾಸ ಮುಗಿಸಿ ವಾಪಸ್ಸಾದ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅತಿವೃಷ್ಟಿಗೆ ಒಳಗಾದ ಪ್ರದೇಶಗಳಲ್ಲಿ ನಾಳೆ ವೈಮಾನಿಕ ಸಮೀಕ್ಷೆ ನಡೆಸಲು ತೆರಳುತ್ತೇನೆ. ಕಲಬುರಗಿಯಲ್ಲಿ ನೆರೆಹಾನಿ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಡಳಿತದ ಜೊತೆ ಚರ್ಚೆ ಮಾಡುತ್ತೇನೆ. ಯಾದಗಿರಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆಯಲ್ಲೂ ಮಾತುಕತೆ ಮಾಡುತ್ತೇನೆ. ವಿಜಯಪುರದಲ್ಲಿ ಕೂಡ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ನೆರೆಹಾನಿ ಸಂಬಂಧ ಕೇಂದ್ರದಿಂದ ಹಣ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಧಾನಿ ಜೊತೆ ಮಾತಾಡಿದ್ದೇನೆ, ನಾವು ಸಹ ಪ್ರಸ್ತಾವನೆ ಕಳುಹಿಸಿದ್ದೇವೆ, ಜಿಲ್ಲಾಡಳಿಗಳಿಂದ ಇನ್ನೂ ಪೂರ್ಣ ವರದಿ ಬಂದಿಲ್ಲ, ಬಂದ ಬಳಿಕ ಪೂರ್ಣ ವರದಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು.