ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಗೆದ್ದು ಸೋತಿರುವ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಇನ್ನು ಹತ್ತು ದಿನದಲ್ಲಿ ಸಿಹಿ ಸುದ್ದಿ ನೀಡುತ್ತೇನೆ ಎಂದಿದ್ದಾರೆ.
ಅತಿ ಹೆಚ್ಚು ಮತ ಗಳಿಸಿ ಅನರ್ಹತೆಗೆ ಒಳಗಾಗಿದ್ದ ನಲಪಾಡ್ ಬದಲು ದ್ವಿತೀಯ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯರನ್ನು ಅಧ್ಯಕ್ಷರನ್ನಾಗಿ, ಮಂಜುನಾಥ್ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಈ ವಿಚಾರವಾಗಿ ಈಗಲೂ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಮಾಲೋಚಿಸುತ್ತಲೇ ಇರುವ ನಲಪಾಡ್, ತಮಗೆ ಅಧ್ಯಕ್ಷ ಗಾದಿ ಸಿಗಲಿದೆ ಎನ್ನುವ ವಿಶ್ವಾಸದಲ್ಲೇ ಇದ್ದಾರೆ.
ತಮಗೆ ಬಂದಿರುವ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ ಎಂದು ಹೈಕಮಾಂಡ್ಗೆ ದೂರು ನೀಡಿರುವ ರಕ್ಷಾ ರಾಮಯ್ಯ ಮರು ಎಣಿಕೆಗೆ ಒತ್ತಾಯಿಸಿದ್ದರು. ಇದನ್ನು ಪುರಸ್ಕರಿಸಿರುವ ಪಕ್ಷದ ಹಿರಿಯ ನಾಯಕರು ಮರು ಎಣಿಕೆಗೆ ಸೂಚನೆ ನೀಡಿದ್ದಾರೆ. ಈ ಪ್ರಕ್ರಿಯೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಇನ್ನೊಮ್ಮೆ ಆಗಲಿದೆ. ಆದರೆ ಇಲ್ಲಿ ರಕ್ಷಾ ರಾಮಯ್ಯ ಇನ್ನಷ್ಟು ಕಡಿಮೆ ಮತಕ್ಕೆ ಕುಸಿಯಲಿದ್ದಾರೆ. ತಾವು ಅಧ್ಯಕ್ಷಗಾದಿಗೆ ಏರುವುದು ನಿಶ್ಚಿತ ಎಂಬ ನಿಲುವಿಗೆ ನಲಪಾಡ್ ಬಂದಿದ್ದಾರೆ ಎನ್ನಲಾಗುತ್ತಿದೆ.
ಗೆಲುವು ನನ್ನದೇ
ರಕ್ಷಾ ರಾಮಯ್ಯ ಈವರೆಗೂ ಅಧ್ಯಕ್ಷ ಸ್ಥಾನ ಅಲಂಕರಿಸಿಲ್ಲ. ಸಾಕಷ್ಟು ದಿನ ಆದರೂ ಇನ್ನೂ ತಮ್ಮ ಆಸನದಲ್ಲಿ ಕುಳಿತಿಲ್ಲ. ಅವರಿಗೆ ತಮ್ಮ ಗೆಲುವಿನ ಬಗ್ಗೆ ಸಾಕಷ್ಟು ಹಿಂಜರಿಕೆ ಇದೆ. ಅಧಿಕಾರ ವಹಿಸಿಕೊಂಡು ನಂತರ ಬಿಟ್ಟುಕೊಡುವ ಸ್ಥಿತಿ ಬರಲಿದೆ ಎಂಬ ಆತಂಕದಲ್ಲಿದ್ದಾರೆ. ಇದರಿಂದ ಇವರ ನಡೆಯೇ ನನಗೆ ಅಧ್ಯಕ್ಷ ಗಾದಿ ಸಿಗಲಿದೆ ಎನ್ನುವುದಕ್ಕೆ ಪುರಾವೆ ಎಂದು ಆಪ್ತರ ಬಳಿ ನಲಪಾಡ್ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇನ್ನು ಹತ್ತು ದಿನದಲ್ಲಿ ನಾನೇ ಅಧಿಕೃತ ಅಧ್ಯಕ್ಷ ಎಂಬ ಆಯ್ಕೆಯ ಆದೇಶ ಹೊರಬೀಳಲಿದೆ. ನಾನು ಹೈಕಮಾಂಡ್ ನಾಯಕರಿಗೆ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ವ್ಯಕ್ತಿಗೆ ಬದಲಾಗಲು, ನಾಯಕತ್ವ ನಿರೂಪಿಸಲು ಅವಕಾಶ ಸಿಗಬೇಡವೇ? ನನಗೆ ಅವಕಾಶ ಸಿಗಲಿದೆ ಹಾಗೂ ನನ್ನೊಳಗಿನ ನಾಯಕನ ಪರಿಚಯವೂ ರಾಜ್ಯದಲ್ಲಿ ಆಗಲಿದೆ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ನಾನು ಮಹತ್ವದ ಕೊಡುಗೆ ನೀಡುವ ಭರವಸೆ ನೀಡಿದ್ದೇನೆ. ಅವರಿಗೂ ನನ್ನ ಮೇಲೆ ವಿಶ್ವಾಸ ಮೂಡಿದೆ ಎಂದು ಹೇಳಿಕೊಂಡಿದ್ದಾರೆ.
ಪರ್ಯಾಯ ವ್ಯವಸ್ಥೆ
ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ರಕ್ಷಾ ರಾಮಯ್ಯರನ್ನು ಯುವ ಕಾಂಗ್ರೆಸ್ ಚಟುವಟಿಕೆಯಿಂದ ದೂರ ಇಡಲ್ಲ. ಅವರನ್ನೂ ಜತೆಯಾಗಿಯೇ ಕರೆದೊಯ್ಯುತ್ತೇನೆ. ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಜವಾಬ್ದಾರಿ ವಹಿಸುತ್ತೇವೆ. ಯಾರನ್ನೂ ಪಕ್ಷದ ಚಟುವಟಿಕೆಯಿಂದ ದೂರ ಇಡುವ ಕಾರ್ಯ ಮಾಡಲ್ಲ ಎಂದು ಹೇಳಿಕೊಂಡಿರುವ ಅವರು, ತಾವೇ ಇನ್ನು ಹತ್ತು ದಿನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ.