ಬೆಂಗಳೂರು: ತಮ್ಮ ನೆಚ್ಚಿನ ನಾಯಕರುಗಳ ಗೆಲುವಿಗೆ ಅಭಿಮಾನಿಗಳು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಅದೇ ಮೋದಿ ಅವರ ರೀತಿ ಅಪ್ಪಟ ಅಭಿಮಾನಿಯೊಬ್ಬ ತನ್ನ ಪ್ರೀತಿಯ ನಾಯಕನಿಗಾಗಿ ತನ್ನದೇ ಸ್ಟೈಲ್ನಲ್ಲಿ ಪ್ರಚಾರ ನಡೆಸುತ್ತಿದ್ದಾನೆ.
ಲೋಕ ಸಮರದ ಕಾವು ಹೆಚ್ಚಾಗುತ್ತಿದ್ದ ಹಾಗೇ ರಾಜಕೀಯ ನಾಯಕರುಗಳ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ತಮ್ಮ ನೆಚ್ಚಿನ ನಾಯಕರ ಗೆಲುವಿಗೆ ಕೊಡುಗೆಗಳನ್ನು ನೀಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ತನ್ನ ನಾಯಕನಿಗಾಗಿ ತನ್ನದೇ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾನೆ. ಅಷ್ಟಕ್ಕೂ ಆತ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೆಸರು ಅಶೋಕ್ ಚಕ್ರವರ್ತಿ. ಕೊರಟಗೆರೆಯ ನಿವಾಸಿ. ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್.
ಈತ ತನ್ನದೇ ದುಡಿಮೆಯ ಹಣದಲ್ಲಿ ಮೋದಿ ಮತ್ತೊಮ್ಮೆ ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರಕ್ಕಿಳಿದಿದ್ದಾನೆ. ತಲೆಯಲ್ಲಿ ಮೋದಿ ಬರಹವಿರುವ ಹೇರ್ ಕಟ್ಟಿಂಗ್ ಮಾಡಿಸಿ, ವಿಶೇಷವಾಗಿ ವಿನ್ಯಾಸಗೊಳಿಸಿರುವ ಕಾರಿನಲ್ಲಿ ರಾಜ್ಯಾದ್ಯಂತ ಮೋದಿ ಪರ ಪ್ರಚಾರ ಮಾಡಲು ಮುಂದಾಗಿದ್ದಾನೆ.
ಕಾರನ್ನು ಸಂಪೂರ್ಣ ಕೇಸರಿಮಯ ಮಾಡಿದ್ದು, ಮೋದಿ ಸ್ಟಿಕ್ಕರ್ನ್ನು ಕಾರು ಪೂರ್ತಿ ಅಂಟಿಸಿದ್ದಾನೆ. ಮೋದಿ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳನ್ನೂ ಕಾರಿನಲ್ಲಿ ಬರೆಸಿದ್ದಾನೆ. ಮೋದಿ ಮತ್ತೊಮ್ಮೆ ಎಂಬ ಬರಹದೊಂದಿಗೆ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದ್ದಾನೆ.
ಈ ಅಪ್ಪಟ ಅಭಿಮಾನಿ ಬುಧವಾರ ನಗರದ ಬಿಜೆಪಿ ಮಾಧ್ಯಮ ಕೇಂದ್ರಕ್ಕೆ ಆಗಮಿಸಿ, ಕೇಸರಿ ಮುಖಂಡರನ್ನು ಭೇಟಿ ಮಾಡಿದ್ದಾನೆ. ಕಳೆದ ಬಾರಿ ಬೈಕ್ನಲ್ಲಿ ಪ್ರಚಾರ ಮಾಡಿದ ಅಶೋಕ್, ಈ ಬಾರಿ ಕಾರಿನಲ್ಲಿ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ನಡೆಸಲಿದ್ದಾನೆ. ಕಳೆದ ಬಾರಿಯೂ ಲೋಕಸಭೆ ಚುನಾವಣೆ ವೇಳೆ ಮೋದಿ ಪರ ಬೈಕ್ ಮೂಲಕ ಪ್ರಚಾರ ಕೈಗೊಂಡಿದ್ದ.
ಈ ಬಾರಿ ಕಾರೊಂದನ್ನು ಕೇಸರಿಮಯವಾಗಿ ಅಲಂಕಾರ ಮಾಡಿಕೊಂಡು ಇಡೀ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದಾನೆ. ಸ್ವಂತ ಖರ್ಚಿನಲ್ಲಿ ಇಡೀ ಕಾರನ್ನು ಸಿಂಗರಿಸಿ ಪ್ರಚಾರ ಕೈಗೊಳ್ಳುತ್ತಿದ್ದಾನೆ.