ಬೆಂಗಳೂರು : ಮೋದಿ 2.0ರ ಒಂದು ವರ್ಷ ಅಭಿಯಾನದ ಅಂಗವಾಗಿ ರಾಜ್ಯದಲ್ಲಿ ಆರಂಭಿಸಲಾಗಿದ್ದ ಕರ್ನಾಟಕ ಜನ ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಾಳೆ ನಡೆಯಲಿದೆ. ವಿಡಿಯೋ ಸಂವಾದದ ಮೂಲಕ 50 ಲಕ್ಷ ಜನರನ್ನು ತಲುಪುವ ಗುರಿಯನ್ನು ರಾಜ್ಯ ಬಿಜೆಪಿ ಹಾಕಿಕೊಂಡಿದೆ.
ಜೂನ್ 7 ರಂದು ಆರಂಭವಾದ ಕೇಂದ್ರ ಸರ್ಕಾರದ ಒಂದು ವರ್ಷ ಸಾಧನೆ ಮತ್ತು ಕೋವಿಡ್-19 ಬಗ್ಗೆ ಜಾಗೃತಿ ಅಭಿಯಾನದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿತ್ತು. ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮನೆ ಮನೆ ಸಂಪರ್ಕ ಅಭಿಯಾನ, ಸಾಮಾಜಿಕ ಜಾಲತಾಣಗಳ ಮೂಲಕ ರ‍್ಯಾಲಿಗಳು, ಕೋವಿಡ್-19ರ ಬಗ್ಗೆ ಜಾಗೃತಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ನಾಳೆ 6 ಗಂಟೆಗೆ ಮೋದಿ ಒಂದು ವರ್ಷ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ದೆಹಲಿಯಿಂದ ವಿಡಿಯೋ ಸಂವಾದದ ಮೂಲಕ ಸಮಾರೋಪ ಭಾಷಣ ಮಾಡಲಿದ್ದಾರೆ. ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾಗವಹಿಸಿ ಮಾತನಾಡಲಿದ್ದಾರೆ.
ಈ ವರ್ಚುವಲ್ ರ‍್ಯಾಲಿಯಲ್ಲಿ 50 ಲಕ್ಷ ಜನ ವೀಕ್ಷಿಸುವ ಮೂಲಕ ಪರೋಕ್ಷವಾಗಿ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.