ಬೆಂಗಳೂರು: ಹಣಕಾಸು ವಿಚಾರವಾಗಿ ಉಂಟಾದ ಕಲಹಕ್ಕೆ ಬೇಸತ್ತು ಪ್ರಿಯಕರನ ವಿರುದ್ಧ ಮಾಡೆಲ್ ಒಬ್ಬರು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
25 ವರ್ಷದ ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಈಕೆ ತಾಯಿ ತ್ರಿವೇಣಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಿಯಕರ ಅಕ್ಷಯ್ ಕುಮಾರ್ನನ್ನ ಬಂಧಿಸಲಾಗಿದೆ. ಜುಲೈ 21 ರಂದು ಯುವತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೈರಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಬರೆದಿಟ್ಟಿದ್ದಾಳೆ. ಈ ಸಂಗತಿ ಪ್ರಾಥಮಿಕ ತನಿಖೆ ವೇಳೆ ಕಂಡು ಬಂದ ಹಿನ್ನೆಲೆ ಅಕ್ಷಯ್ ನನ್ನ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಶ್ರೀ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಷಯ್ ಬಸವೇಶ್ವರ ನಗರವೊಂದರಲ್ಲಿ ಜಿಮ್ ಟ್ರೈನರ್ ಆಗಿದ್ದ. 2021ರಲ್ಲಿ ಫೇಸ್ಬುಕ್ ಮುಖಾಂತರ ಇಬ್ಬರ ಪರಿಚಯವಾಗಿ ಕ್ರಮೇಣ ಪ್ರೀತಿಗೆ ತಿರುಗಿತ್ತು. ವಿದ್ಯಾಶ್ರೀ ಪ್ರವೃತ್ತಿಯಲ್ಲಿ ಮಾಡೆಲಿಂಗ್ ಆಗಿದ್ದರು.
ಕಳೆದ ಎರಡು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಜೋಡಿ ಅನೋನ್ಯವಾಗಿತ್ತು. ಈ ನಡುವೆ ಅಕ್ಷಯ್ಗೆ ಹಣಕಾಸಿನ ಸಮಸ್ಯೆಯಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಯುವತಿ ಹಂತ - ಹಂತವಾಗಿ 1.60 ಲಕ್ಷ ಹಣ ಕೊಟ್ಟಿದ್ದರು. ಕಾಲ ಕ್ರಮೇಣ ನೀಡಿದ ಹಣ ಕೇಳಿದರೆ ಮನ ಬಂದಂತೆ ಯುವತಿಗೆ ಬೈಯುತ್ತಿದ್ದ. ಅಲ್ಲದೇ ಯುವತಿ ಕುಟುಂಬಸ್ಥರನ್ನು ನಿಂದಿಸುತ್ತಿದ್ದ. ಅಲ್ಲದೇ ತನ್ನನ್ನ ಕಡೆಗಣಿಸಿ ತನ್ನಿಂದ ದೂರವಾಗುತ್ತಿರುವುದಾಗಿ ಭಾವಿಸಿ ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಯುವತಿಯು ಡೈರಿಯಲ್ಲಿ ತನ್ನ ಸಾವಿಗೆ ಅಕ್ಷಯ್ ಕಾರಣ ಎಂದು ಡೆತ್ ನೋಟ್ ಬರೆದಿದ್ದಾಳೆ ಎಂದು ಮೃತ ಯುವತಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಿಷ್ಟು: ಮಗಳ ಸಾವಿಗೆ ಅಕ್ಷಯ್ ಕಾರಣ ಎಂದು ದೂರು ನೀಡಿದ ಮೇರೆಗೆ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ನಗರ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ. ಈ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದ ಅವರು, ತನ್ನ ಮಗಳ ಆತ್ಮಹತ್ಯೆಗೆ ಅಕ್ಷಯ್ ಕಾರಣ ಎಂದು ಮೃತ ಯುವತಿಯ ತಾಯಿ ದೂರು ಸಲ್ಲಿಸಿದ್ದರು. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಯುವತಿಯ ಫೋನ್ ನಂಬರ್, ಚಾಟ್ ಮತ್ತು ರೂಂ ಪರಿಶೀಲಿಸಿದಾಗ ಡೆತ್ ನೋಟ್ ದೊರೆಯಿತು. ನನ್ನ ಸಾವಿಗೆ ಅಕ್ಷಯ್ ಕುಮಾರ್ ಕಾರಣ ಎಂದು ಯುವತಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು ಎಂದು ಪೊಲೀಸ್ ಅಧಿಕಾರಿ ಶಿವಪ್ರಕಾಶ್ ಹೇಳಿದರು.
ಡೆತ್ನೋಟ್ನಲ್ಲಿ ಹೆಸರು ಉಲ್ಲೇಖವಾಗಿರುವುದರಿಂದ ಎಫ್ಐಆರ್ ದಾಖಲಿಸಿದ್ದು, ಅಕ್ಷಯ್ ಕುಮಾರ್ನನ್ನು ಬಂಧಿಸಲಾಗಿದೆ. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ವಿದ್ಯಾಶ್ರೀಗೆ 2021ರಲ್ಲಿ ಫೇಸ್ಬುಕ್ ಮೂಲಕ ಅಕ್ಷಯ್ ಕುಮಾರ್ ಪರಿಚಯವಾಗಿದೆ. ಇತ್ತಿಚೇಗೆ ಅಕ್ಷಯ್ ವಿದ್ಯಾಶ್ರೀಯನ್ನು ದೂರವಿಡುತ್ತಿದ್ದ. ವಿದ್ಯಾಶ್ರೀ ಜೊತೆ ಅಕ್ಷಯ್ ಹಣದ ವ್ಯವಹಾರ ಸಹ ನಡೆಸಿರುವುದು ಡೆತ್ನೋಟ್ ಮೂಲಕ ತಿಳಿದು ಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಓದಿ: ಮಹಿಳೆ ಥಳಿಸಿ ಬಟ್ಟೆ ಹರಿದರು.. ರಾತ್ರಿಯಿಡಿ ಮರಕ್ಕೆ ಕಟ್ಟಿ ಹಾಕಿದರು:ನಾಲ್ವರ ಬಂಧನ, ತನಿಖೆ ಚುರುಕು