ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ವತಿಯಿಂದ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ನ.13 ರಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಇಲ್ಲಿಯವರೆಗೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ನಮ್ಮ ಮೆಟ್ರೋ ಪೇಟಿಎಂ, ವಾಟ್ಸ್ಆ್ಯಪ್ ಮತ್ತು ಯಾತ್ರಾ ಪ್ರಯಾಣಿಕರಿಗೆ ಒಂದು ಪ್ರಯಾಣಕ್ಕೆ ನೀಡಲಾಗುತ್ತಿತ್ತು. ಇದೀಗ ಸಾರ್ವಜನಿಕರ ಬೇಡಿಕೆಯ ಮೇರೆಗೆ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಸೋಮವಾರದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಒಮ್ಮೆ ಆರು ಜನರ ಕುಟುಂಬ/ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪರಿಚಯಿಸಲಾಗುತ್ತಿದೆ. ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಟೋಕನ್ ದರಕ್ಕಿಂತ ಶೇ.5 ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.
ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರ ಸಂಖ್ಯೆಗೆ ಎನ್‌ಕ್ರಿಪ್ಟ್ ಮಾಡಿದ ಕ್ಯೂಆರ್ ಟಿಕೆಟ್ ಬರುತ್ತದೆ. ಈ ಕ್ಯೂಆರ್ ಟಿಕೆಟ್ ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಎಫ್‌ಸಿ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದು ಬಿ.ಎಂ.ಆರ್.ಸಿ.ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಮೆಟ್ರೋ ಪ್ರಾರಂಭಿಸಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ : ಸಚಿವ ರಾಮಲಿಂಗಾರೆಡ್ಡಿ
ಇನ್ನೊಂದೆಡೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಬಿಡದಿಯು ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ನಮ್ಮ ಮೆಟ್ರೋ ಘೋಷಣೆ ಮಾಡಲಾಗಿದೆ. ಹಾಗೆಯೇ, ಇನ್ನುಮುಂದೆ ಬಿಡದಿ ಪ್ರಾಧಿಕಾರ ಹೆಸರಿಗೆ ಬದಲಾಗಿ ಗ್ರೇಟರ್ ಬೆಂಗಳೂರು ಎಂಬ ಹೊಸ ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಮನಗರ... ಬಿಡದಿಗೆ 'ನಮ್ಮ ಮೆಟ್ರೋ' : ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ
ಬಿಡದಿಯಲ್ಲಿ ನಮ್ಮ ಮೆಟ್ರೋ ಮಾಡುವ ಬಗ್ಗೆ ಇಲ್ಲಿನ ಎಂಎಲ್ಎ ಹಾಗೂ ಎಂಪಿಗಳು ಮನವಿ ಮಾಡಿದ್ದರು. ಈ ಬಗ್ಗೆ ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಡಿಪಿಆರ್ ಮಾಡಲು ಸೂಚಿಸಿದ್ದೇನೆ. ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ 10 ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಆದರೆ ಅದು ಹಾಗೆಯೆ ಉಳಿದುಕೊಂಡಿದೆ. ಹೀಗಾಗಿ, ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ಗೆ ಬಿಡದಿ ಘೋಷಿಸಲಾಗಿದೆ. ಮುಂದೆ ಲೀಗಲ್ ಪ್ರೊಸಿಜರ್ ಆಗಲಿದೆ. ಎಲ್ಲರಿಗೂ ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದರು.