ಬೆಂಗಳೂರು: ಕೇಂದ್ರ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಪ್ರಯೋಗಕ್ಕೆ ಮುಂದಾದ ಬೆನ್ನಲ್ಲೇ ಸಾರಿಗೆ ನಿಗಮಗಳೂ ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸಿವೆ. ಹೀಗಾಗಿ ಬಸ್ ಚಾಲಕರು, ನಿರ್ವಾಹಕರು ಮೊಬೈಲ್ ಬಳಸಿದರೆ ಅವರ ಕೈನಿಯಂದ ಮೊಬೈಲ್ ಕಿತ್ತುಕೊಳ್ಳುವ ಹೊಸ ನಿಯಮದ ಬಗ್ಗೆ ನೌಕರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.
ಚಾಲನೆ ವೇಳೆ ಮೊಬೈಲ್ ಬಳಸಬಾರದು ಅಂತ ಚಾಲಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊಬೈಲ್ ಬಳಕೆಯಿಂದ ಸರ್ಕಾರಿ ಬಸ್ಗಳು ಅಪಘಾತಕ್ಕೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಚಾಲಕರು ಹಾಗೂ ನಿರ್ವಾಹಕರ ಮೇಲೆ ಅಮಾನತು ಅಸ್ತ್ರ ಪ್ರಯೋಗ ಮಾಡಲಾಗಿದೆ. ಮುಂದಿನ ಸೆ. 1ರಿಂದ ಮೊಬೈಲ್ ಬಳಸುವ ಚಾಲಕ ನಿರ್ವಾಹಕರನ್ನ ಸಸ್ಪೆಂಡ್ ಮಾಡುವುದಾಗಿ ನಿಗಮವು ಸುತ್ತೋಲೆ ಹೊರಡಿಸಿದೆ.
ಕೆಎಸ್ಆರ್ಟಿಸಿಯಲ್ಲೇ ಅಪಘಾತ ಪ್ರಕರಣ ಹೆಚ್ಚಾಗುತ್ತಿವೆ. ಮೊಬೈಲ್ ಬಳಕೆಗೆ ಬ್ರೇಕ್ ಹಾಕಿದರೆ ಎಲ್ಲವೂ ಸರಿಹೋಗುತ್ತೆ ಎಂಬ ವರದಿ ನಿಗಮಗಳ ಕೈ ಸೇರಿದೆ. ಹೀಗಾಗಿ ಚಾಲಕ ಹಾಗೂ ನಿರ್ವಾಹಕರಿಗೆ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ನಿಗಮ ತೀರ್ಮಾನಿಸಿದೆ.
ಬಸ್ ಚಾಲನೆ ವೇಳೆ ಚಾಲಕ ಮೊಬೈಲ್ ಬಳಸಿ ಇತರರ ಜೀವಕ್ಕೆ ಆಪತ್ತು ತಂದಿರುವುದನ್ನು ನಿಗಮದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ನಿಗಮದ ತೀರ್ಮಾನ ಚಾಲಕರಿಗೆ ಓಕೆ, ಆದರೆ ನಿರ್ವಾಹಕರಿಗೆ ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಜನರು ಬಸ್ ಹತ್ತುವಾಗ, ಇಳಿಯುವಾಗ ನಿರ್ವಾಹಕರ ಗಮನ ಮೊಬೈಲ್ನತ್ತ ಇರುತ್ತಂತೆ. ಹೀಗಾಗಿ ನಿರ್ವಾಹಕರು ಬಸ್ ಹತ್ತುತ್ತಿದ್ದಂತೆ ಮೊಬೈಲ್ ಬಳಕೆ ಬಿಡಬೇಕು ಎಂಬುದು ನಿಗಮಗಳ ನಿಯಮವಾಗಿದೆ.
ನಿಗಮದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಈ ಹೊಸ ನಿಯಮವನ್ನ ಸಿಬ್ಬಂದಿ ಎಷ್ಟರಮಟ್ಟಿಗೆ ಪಾಲನೆ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕು.