ಬೆಂಗಳೂರು: ಅಂದು ಮೋದಿ ಮೀನ್ಸ್ ಬ್ಯುಸಿನೆಸ್ ಎನ್ನಲಾಗ್ತಿತ್ತು. ಇವತ್ತು ಮೋದಿ ಮೀನ್ಸ್ ಕ್ರೈಸಿಸ್ ಎನ್ನಲಾಗಿದೆ ಎಂದು ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಕುಟುಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ಘೋಷಣೆಗಳಿಗೆ ಕೊರತೆಯಿಲ್ಲ. ಈ 7 ವರ್ಷಗಳಲ್ಲಿ ಅವರ ಸಾಧನೆ ಅರ್ಥವಾಗಿದೆ. ಅಚ್ಛೇ ದಿನದ ಬಳಿಕ ಹಲವು ಘೋಷಣೆ ಬಂದಿವೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಬಂದವು. ಆತ್ಮನಿರ್ಭರ್ ಯೋಜನೆಯೂ ಬಂತು. ಆದರೆ ಈ ಯೋಜನೆಗಳು ಜನರನ್ನು ಸ್ವಾವಲಂಬಿಯನ್ನಾಗಿ ಮಾಡಲಿಲ್ಲ ಎಂದು ಜರಿದರು.
ಆತ್ಮನಿರ್ಭರ್ ಅಲ್ಲ, ಪರಮಾತ್ಮ ನಿರ್ಭರ್ ಎಂದಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ. ಇದನ್ನ ನೋಡಿದರೆ ಕೇಂದ್ರದ ಸಾಧನೆ ಗೊತ್ತಾಗುತ್ತದೆ. ಹೊರಗೆ ಸಿಂಗಾರ, ಒಳಗೆ ಗೋಣಿ ಸೊಪ್ಪಿನಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಮುಗ್ಧ ಜನರ ರಕ್ತದ ಕಣ್ಣೀರು ದೇಶದಲ್ಲಿ ಹರಿದಿದೆ:
ರಾಷ್ಟ್ರ ಸಂಕಷ್ಟವನ್ನ ಎದುರಿಸುತ್ತಿದೆ. ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ಆದರೆ ಅದ್ಯಾವುದನ್ನೂ ಮೋದಿ ಮಾಡ್ತಿಲ್ಲ. ಮೋದಿ ಪಾರ್ಲಿಮೆಂಟ್ ವೇದಿಕೆಯನ್ನ ಉಪಯೋಗಿಸಿಕೊಳ್ಳಲಿಲ್ಲ. ಲೋಕಸಭೆಯಲ್ಲಿ 19 ಗಂಟೆ ಮಾತ್ರ ಮಾತನಾಡಿದ್ದಾರೆ. ರಾಜ್ಯಸಭೆಯಲ್ಲಿ 14 ಗಂಟೆ ಮಾತ್ರ ಮಾತನಾಡಿದ್ದಾರೆ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ಮೇಲೆ ನಂಬಿಕೆಯಿಲ್ಲ. ಸಚಿವರು ಅವರ ಇಲಾಖೆಗಳ ಬಗ್ಗೆ ಮಾತನಾಡಿಲ್ಲ. ಪ್ರಧಾನಿ ಇಮೇಜ್ ಕಾಪಾಡುವುದೇ 70 ಸಚಿವರ ಗುರಿಯಾಗಿದೆ ಎಂದು ಹೇಳಿದರು.
ಮೋದಿ ಮಾತಾಡಲಿಲ್ಲ:
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ನೇರ ಆರೋಪ ಮಾಡಲಾಯ್ತು. ಸಂಸತ್ತಿನಲ್ಲಿ ಅದರ ಬಗ್ಗೆ ಉತ್ತರ ಕೊಡಲಿಲ್ಲ. ಅವರ ಪರ ಅರುಣ್ ಜೇಟ್ಲಿ ಉತ್ತರ ಕೊಡ್ತಿದ್ರು. ಇದು ಕೇಂದ್ರ ಸರ್ಕಾರದ ಪರಿಸ್ಥಿತಿ. ನೋಟ್ ಬ್ಯಾನ್ ನಲ್ಲೂ ಕ್ಯಾಬಿನೆಟ್ ಚರ್ಚೆಯಾಗಿರಲಿಲ್ಲ. ಕ್ಯಾಬಿನೆಟ್ ನಲ್ಲಿ ಇವತ್ತಿಗೂ ಚರ್ಚೆಗಳು ನಡೆಯಲ್ಲ. ಪ್ರಧಾನಿ ಮೋದಿ ರಾಷ್ಟ್ರವನ್ನ ಕಟ್ಟಲಿಲ್ಲ. ಅವರು ಕಟ್ಟಿದ್ದು ಬಿಜೆಪಿ ಪಕ್ಷವನ್ನ ಮಾತ್ರ. ಎಲ್ಲಾ ರಾಜ್ಯಗಳಲ್ಲಿ ಪಕ್ಷದ ಅದ್ಧೂರಿ ಕಚೇರಿಯನ್ನ ಸ್ಥಾಪಿಸಿದ್ದಾರೆ. ಇದನ್ನ ಬಿಟ್ಟು ಜನರ ಅಭಿವೃದ್ಧಿಯನ್ನ ಕಟ್ಟಲೇ ಇಲ್ಲ ಎಂದರು.
1800 ಚ.ಕಿ.ಮೀ ಭಾಗವನ್ನು ಚೀನಾ ಆಕ್ರಮಿಸಿದೆ. ಇದನ್ನ ಆರ್ ಎಸ್ ಎಸ್ ನ ಮೋಹನ್ ಭಾಗವತ್ ಹೇಳ್ತಾರೆ. ಆದ್ರೆ ಒಂದಿಂಚೂ ಬಿಟ್ಟಿಲ್ಲ ಅಂತ ಮೋದಿ ಮಾತನಾಡ್ತಾರೆ. ಇದಕ್ಕೆ ನಾವೇನು ಹೇಳ್ಬೇಕು. ರಾಷ್ಟದ ಜಿಡಿಪಿ -75 ಕೆಳಗೆ ಬಂದಿದೆ. ಇದು 40 ವರ್ಷಗಳಲ್ಲೇ ಇಲ್ಲದಷ್ಟು ಕುಸಿದಿದೆ. ಎನ್ ಎಸ್ ಎಸ್ ಸರ್ವೆ ಇದನ್ನ ಸ್ಪಷ್ಟಪಡಿಸಿದೆ. ವಿಶ್ವಗುರು ಆಗ್ತೇವೆ ಹೇಳ್ತಿದ್ದಾರೆ. ಇವರುವ ಆಡಳಿತಕ್ಕೆ ಬರುವ ಮೊದಲೇ ಭಾರತ ವಿಶ್ವ ಗುರುವಾಗಿತ್ತು. ಬಾಂಗ್ಲಾ ಇವತ್ತು ನಮಗಿಂತ ಜಿಡಿಪಿಯಲ್ಲಿ ಮೇಲಿದೆ. ಯಾವಾಗಲೂ ಗುಜರಾತ್ ಮಾಡೆಲ್ ಅಂತಾರೆ. ಆದರೆ ಅಲ್ಲಿ ಏನು ಇದೆ ಅನ್ನೋದು ಇವತ್ತಿಗೂ ತಿಳಿಸಿಲ್ಲ. ದೇಶದ ಜನರನ್ನ ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದರು.
ಜಾತಿ ಆಧಾರದಲ್ಲಿ ಲಸಿಕೆ:
ಜಾತಿ ಆಧಾರದಲ್ಲಿ ಲಸಿಕೆಯನ್ನ ಹಾಕ್ತಿದ್ದಾರೆ. ಮಂಗಳವಾರ ಮಲ್ಲೇಶ್ವರಂ ಗರ್ಲ್ಸ್ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ದಲಿತರಿಗೆ ಲಸಿಕೆ ಹಾಕದೆ ಕಳಿಸಿದ್ದಾರೆ. ನಿಮಗೆ ಇಲ್ಲಿ ಹಾಕಲ್ಲ, ಬಿಬಿಎಂಪಿಗೆ ಹೋಗಿ ಅಂತಾರೆ. ಇದರ ಬಗ್ಗೆ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡ್ತಿದ್ದಾರೆ. ನಾವು ಮುಂದೆ ರಸ್ತೆಗೆ ಬರ್ತೇವೆ, ಜೈಲಿಗೆ ಹೋಗೋಕು ಸಿದ್ಧರಿದ್ದೇವೆ. ಬೆಡ್ ಬ್ಲಾಕಿಂಗ್ ಕೇಸ್ ಆಯ್ತು. ಯಾರ ಮೇಲೆ ಕೇಸ್ ಹಾಕಿದ್ದಾರೆ. ದಲಿತರ ಬಗ್ಗೆ ಯಾರು ಧ್ವನಿ ಎತ್ತುತ್ತಾರೆ ಹೇಳಿ. ಇದು ಉಳ್ಳವರ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಗಂಗಾನದಿಯಲ್ಲಿ ಹೆಣ:
ಗುಜರಾತ್ ನಲ್ಲಿ ಕೋವಿಡ್ ಡೆತ್ ರೇಟ್ ಕಡಿಮೆ ಕೊಟ್ಟಿದ್ದಾರೆ. 1.20 ಲಕ್ಷ ಡೆತ್ ಆಗಿದೆ, ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಆದರೆ ಸರ್ಕಾರ ಘೋಷಿಸಿದ್ದು ಕೇವಲ 4 ಸಾವಿರ. ಗಂಗಾನದಿಯಲ್ಲಿ ನೂರಾರು ಹೆಣ ತೇಲಿಬರ್ತಿವೆ. ಉತ್ತರಪ್ರದೇಶದಲ್ಲಿ ಸಾವಿನ ಲೆಕ್ಕ ಕೊಡ್ತಿದ್ದಾರಾ? ಪಂಜಾಬ್ ನಲ್ಲಿ ಐದು ನದಿಗಳು ಹರಿಯುತ್ತವೆ. ಅಲ್ಲಿ ಯಾಕೆ ಹೆಣಗಳು ತೇಲಿಬರುವುದಿಲ್ಲ. ಗೌರವಯುತ ಶವಸಂಸ್ಕಾರ ನಡೆಸೋಕು ಇವರಿಗೆ ಆಗಲ್ಲ ಎಂದು ಹರಿಹಾಯ್ದರು.