ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಬೇಕು ಇಲ್ಲವೇ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿದ ಛಲವಾದಿ ನಾರಾಯಣಸ್ವಾಮಿ, ನನ್ನ ವಿರುದ್ಧ ಸಿದ್ದರಾಮಯ್ಯನವರು ಜಾತಿ ನಿಂದನೆ ಮಾಡಿದ್ದಾರೆ. ಸದಾ ನೀವು ಅಸ್ಪೃಶ್ಯರು, ಗುಲಾಮರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದನ್ನು ಉಲ್ಲೇಖಿಸಿ ಎಸ್‍ಸಿ-ಎಸ್‍ಟಿ ಕಾಯ್ದೆ ಅನ್ವಯ ಜಾತಿನಿಂದನೆ ದೂರು ಸಲ್ಲಿಸಿದ್ದಾರೆ. ಕೂಡಲೇ ಎಫ್ಐಆರ್ ದಾಖಲಿಸಬೇಕು, ಸಿದ್ದರಾಮಯ್ಯರನ್ನು ಬಂಧಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಟ್ವೀಟ್ ಮಾಡುವ ಭರದಲ್ಲಿ ನಾವು ಸದಾ ಅಸ್ಪೃಶ್ಯರು ಎಂದು ಹೇಳಿ, ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಇಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.
ಸಿದ್ದರಾಮಯ್ಯರ ಬಗ್ಗೆ ನಮಗೆ ಬಹಳ ಗೌರವವಿದೆ. ಆದರೆ, ಅವರ ರಾಜಕೀಯ ಜಿದ್ದಾಜಿದ್ದಿ ವಿಚಾರದಲ್ಲಿ ನಮ್ಮ ಆಕ್ಷೇಪವಿದೆ. ನಮ್ಮನ್ನು ಗುಲಾಮರು, ಅಸ್ಪೃಶ್ಯರೆಂದು ಕರೆದು ನಿಂದಿಸಿದ್ದಾರೆ. ಇಂತಹ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್‍ಸಿ, ಎಸ್‍ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಈ ದೂರು ನೀಡಿದ್ದೇವೆ. ಅವರು ಜಾತಿ ನಿಂದನೆ ಮಾಡಿದ್ದು, ಎಫ್‍ಐಆರ್ ಫೈಲ್ ಮಾಡಿ ಬಂಧಿಸಲು ಒತ್ತಾಯಿಸಿದ್ದೇನೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಮಾಡುವುದಾಗಿ ತಿಳಿಸಿದರು.
ಇದು ಸಿದ್ದರಾಮಯ್ಯರ ದಲಿತ ವಿರೋಧಿ ಧೋರಣೆಗೆ ಸಾಕ್ಷಿ ಎಂದ ನಾರಾಯಣಸ್ವಾಮಿ, ದಲಿತ ಮಹಿಳೆ ಮೋಟಮ್ಮನವರು ತಮ್ಮ ಆತ್ಮಕಥೆಯಲ್ಲಿ ಸಿದ್ದರಾಮಯ್ಯನವರು ನನ್ನ ಎಲ್ಲ ಬೆಳವಣಿಗೆಗೂ ಬಾಗಿಲು ಹಾಕಿದರು ಎಂದು ಹೇಳಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ ಎಂಬುದು ಸಿದ್ದರಾಮಯ್ಯರ ಮೂಲಕ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಹಾಗೂ ಪೊಲೀಸರು ಇದರ ಬಗ್ಗೆ ತೀಕ್ಷ್ಣ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯರನ್ನು ತಕ್ಷಣ ಬಂಧಿಸಿ ನನಗೆ ನ್ಯಾಯ ಕೊಡಬೇಕು ಎಂದು ಅವರು ಮನವಿ ಮಾಡಿದರು. ಇದು ಅಂಗೈ ಹುಣ್ಣು ಇದ್ದಂತೆ. ಇದಕ್ಕೆ ಕನ್ನಡಿ ಬೇಕಾಗಿಲ್ಲ. ಆದ್ದರಿಂದ ತಕ್ಷಣ ಅವರನ್ನು ಬಂಧಿಸಬೇಕಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಇದನ್ನೂ ಓದಿ: ಮೇಕೆದಾಟು ವಿವಾದ ಇತ್ಯರ್ಥಪಡಿಸಿ: ಕೇಂದ್ರಕ್ಕೆ ಸಿಎಂ ಒತ್ತಾಯ..!