ಬೆಂಗಳೂರು: ಕೃಷಿ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ ನಾಲ್ಕು ಗಂಟೆ 3 ಪೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಎಲ್ಲಾ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಆಗ್ರಹಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅವರ ಪರವಾಗಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುತ್ತಿದ್ದ ವೇಳೆ ಹಲವು ಸದಸ್ಯರು ಹಗಲಿನಲ್ಲಿ 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿದರು.
ಶಾಸಕ ವೆಂಕಟರಮಣಯ್ಯ ಮಾತನಾಡಿ, ರಾತ್ರಿ ನಾಲ್ಕು ಗಂಟೆ, ಹಗಲಿನಲ್ಲಿ 3 ಗಂಟೆ ವಿದ್ಯುತ್ ಕೊಡಲಾಗುತ್ತಿದೆ ಎಂದಾಗ ಶಿವಾನಂದ ಪಾಟೀಲ್, ಶಾಸಕ ಶರತ್ ಬಚ್ಚೇಗೌಡ ಇದಕ್ಕೆ ದನಿಗೂಡಿಸಿದರು.
ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಿತ್ಯ 7 ಗಂಟೆ ವಿದ್ಯುತ್ ನೀಡುವ ಬದಲು 3ರಿಂದ 4 ಗಂಟೆ ಮಾತ್ರ ನೀಡಲಾಗುತ್ತಿದೆ. ಲೋಡ್ ಶೆಡ್ಡಿಂಗ್ ಇದೆ. ರಾಮನಗರದಲ್ಲಿ ಆನೆ ಹಾವಳಿ ಇದೆ. ಹೀಗಾಗಿ ರಾತ್ರಿ ಬದಲು ಹಗಲಿನಲ್ಲಿ ವಿದ್ಯುತ್ ನೀಡಬೇಕು. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದ್ದರೂ ಏಕೆ ಲೋಡ್ ಶೆಡ್ಡಿಂಗ್ ಮಾಡುತ್ತೀರಿ ಎಂದಾಗ ಇದಕ್ಕೆ ಹಲವು ಶಾಸಕರು ದನಿಗೂಡಿಸಿದರು.
ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್, ರಾತ್ರಿ ವೇಳೆ 4 ಗಂಟೆ ಹಗಲಿನಲ್ಲಿ 3 ಗಂಟೆ ರೈತರಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದರೂ ಹಂಚಿಕೆ ಸಮಸ್ಯೆ ಇದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಇಂಧನ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.
ಸರಾಸರಿ 12,500 ಮೆಗಾವ್ಯಾಟ್ ಇರುತ್ತಿತ್ತು. ಆದರೆ 14,700 ಮೆಗಾವ್ಯಾಟ್‍ನಷ್ಟು ವಿದ್ಯುತ್ ಬೇಡಿಕೆ ಇದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿದೆ. ದೊಡ್ಡ ಬಳ್ಳಾಪುರದ ಸಾಸಲುವಿನಲ್ಲಿ 66 ಕೆವಿ ಸಾಮರ್ಥ್ಯದ ಹೊಸ ಉಪಕೇಂದ್ರ ನಿರ್ಮಿಸಲಾಗುವುದು ಎಂದರು.
ಬಳಿಕ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿಯವರು ಶಾಸಕರ ಅಭಿಪ್ರಾಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಹಗಲಿನಲ್ಲಿ 4 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆ ಪರಿಶೀಲಿಸಿ ಎಂದು ಸಲಹೆ ನೀಡಿದರು.