ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದ ಜಗಜೀವನ ರಾಮ್ ನಗರದ ವಾರ್ಡ್-136ರಲ್ಲಿ ನವೀಕೃತಗೊಳಿಸಿರುವ ವಿದ್ಯುತ್ ಚಿತಾಗಾರವನ್ನು ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಆಡಳಿತಗಾರರು ಉದ್ಘಾಟನೆಗೊಳಿಸಿದರು.
ಜಗಜೀವನ ರಾಮ್ ನಗರ ವಾರ್ಡ್ನಲ್ಲಿ ವಿದ್ಯುತ್ ಚಿತಾಗಾರದ ನವೀಕೃತ ಕಾಮಗಾರಿಯು ಒಂದು ವರ್ಷದಿಂದ ಸ್ಥಗಿತಗೊಂಡಿತ್ತು. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು.
ಜಗಜೀವನ ರಾಮ್ ನಗರ ವಾರ್ಡ್ನಲ್ಲಿರುವ ವಿದ್ಯುತ್ ಚಿತಾಗಾರವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ವರ್ಕ್ ಅಡಿ ನವೀಕೃತಗೊಳಿಸಲಾಗಿದ್ದು, ಈ ಚಿತಾಗಾರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನದ ಕೊಠಡಿ, ಶೌಚಾಲಯ ವ್ಯವಸ್ಥೆ, ವಾಹನಗಳ ನಿಲುಗಡೆಗೆ ಸುಸಜ್ಜಿತ ಸ್ಥಳ ನಿರ್ಮಾಣ ಸೇರಿದಂತೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ ಚಿತಾಗಾರದ ಪಕ್ಕ ಉದ್ಯಾನವನ ನಿರ್ಮಾಣ ಮಾಡುತ್ತಿದ್ದು, ಇನ್ನೊಂದು ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಇಲ್ಲಿನ ಸ್ಥಳೀಯರು ವಿಲ್ಸನ್ ಗಾರ್ಡನ್‌ಗೆ ಹೋಗಬೇಕಿತ್ತು. ಇದೀಗ ಜಗಜೀವನ ರಾಮ್ ನಗರದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ನವೀಕರಣಗೊಳಿಸಿದ್ದು, ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಚಿತಾಗಾರಗಳಿದ್ದು, ಇಂದು ಲೋರ್ಕಾಪಣೆಗೊಳಿಸಿರುವುದು ಸೇರಿ 12 ಚಿತಾಗಾರಗಳಾಗಿವೆ. ಪ್ರತಿದಿನ ಕೋವಿಡ್ ಹಾಗೂ ನಾನ್-ಕೋವಿಡ್ ಸೇರಿ 165 ಮೃತದೇಹಗಳನ್ನು ಚಿತಾಗಾರಗಳಲ್ಲಿ ಸುಡಬಹುದಾಗಿದೆ. ಸದ್ಯ ಪ್ರತಿದಿನ 30 ಕೋವಿಡ್ ಹಾಗೂ 60 ಅನ್ಯ ಕಾರಣದ ಮೃತದೇಹ ಸೇರಿ ಒಟ್ಟು 90 ಮೃತದೇಹಗಳು ಬರುತ್ತಿವೆ. 12 ಚಿತಾಗಾರಗಳಲ್ಲಿ ಪಣತ್ತೂರು, ಕೂಡ್ಲು, ಕೆಂಗೇರಿ, ಮೇಡಿ ಅಗ್ರಹಾರ(ಯಲಹಂಕ)ದಲ್ಲಿರುವ 4 ಚಿತಾಗಾರಗಳಲ್ಲಿ ಕೋವಿಡ್ ಮತ್ತು ಇನ್ನುಳಿದ ಮೃತದೇಹಗಳನ್ನು ಹಾಗೂ ಉಳಿದ 8 ಚಿತಾಗಾರಗಳಲ್ಲಿ ನಾನ್-ಕೋವಿಡ್ ಮೃತದೇಹಗಳನ್ನು ಸುಡಲಾಗುತ್ತಿದೆ ಎಂದರು.