ಬೆಂಗಳೂರು: ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಬಿ.ಜಡ್ ಜಮೀರ್ ಅಹಮದ್ ಖಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿದೆ. ಹೀಗಾಗಿ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಜಮೀರ್‌ಗೆ ಹಿನ್ನಡೆ ಆದಂತಾಗಿದೆ. ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಗುರುವಾರ ಆದೇಶ ಪ್ರಕಟಿಸಿದೆ.
ಪ್ರಕರಣ ಸಂಬಂಧ ನಡೆದಿದ್ದ ವಿಚಾರಣೆ ವೇಳೆ ಜಮೀರ್ ಪರ ವಕೀಲ ಇಸ್ಮಾಯಿಲ್ ಜಬೀವುಲ್ಲಾ, ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸುವ ಮುನ್ನ ತನಿಖಾ ಸಂಸ್ಥೆ ಪ್ರಾಥಮಿಕ ವಿಚಾರಣೆ ನಡೆಸುವುದು ಕಡ್ಡಾಯ. ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಎಸಿಬಿ ನೇರವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಅರ್ಜಿದಾರರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ವರದಿ ಸಲ್ಲಿಸಿತ್ತು. ಆ ವರದಿ ಆಧರಿಸಿ ಎಸಿಬಿ ಎಫ್‌ಐಆರ್ ದಾಖಲಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ : ಬಿಟ್ ಕಾಯಿನ್ ಪ್ರಕರಣದ ಆರೋಪಿಯ ಸಹೋದರನಿಗೆ ಲುಕ್‌ಔಟ್ ನೋಟಿಸ್ ಹಿಂಪಡೆಯುವ ಕುರಿತು ಪರಿಶೀಲಿಸಲು ’ಇಡಿ’ಗೆ ಹೈಕೋರ್ಟ್ ಸೂಚನೆ
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಲೋಕಾಯುಕ್ತ ಪರ ವಕೀಲರು, ಅಕ್ರಮವಾಗಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸುವ ಅಗತ್ಯ ಇಲ್ಲ. ಹಾಗಾಗಿ, ಎಸಿಬಿಯು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮ ಕಾನೂನು ಬದ್ಧವಾಗಿದ್ದು, ತಡೆ ನೀಡಬಾರದು ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ ಏನು ?: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ, 2022ರ ಮೇ ತಿಂಗಳಲ್ಲಿ ಎಫ್‌ಐಆರ್ ದಾಖಲಿಸಿತ್ತು. ಶಾಸಕರು ಆದಾಯ ಮೀರಿ 87 ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ಗಳಿಸಿರುವ ಅಂಶ ದಾಳಿ ವೇಳೆ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿತ್ತು. ಇದರಿಂದ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ ಜಮೀರ್ ಅಹಮದ್, ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದರು. ಹಾಗೆಯೇ, ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಜನ ಸ್ವಾರ್ಥಿಗಳಾಗಿದ್ದು ಹಣ ಪಡೆದು ಮತ ಹಾಕುವ ಚಾಳಿ ಮುಂದುವರೆಸುತ್ತಿದ್ದಾರೆ: ಹೈಕೋರ್ಟ್ ಬೇಸರ