ಬೆಂಗಳೂರು: ರಾಜರಾಜೇಶ್ವರಿನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಅಲ್ಲಿನ ನಿಲಯ ಪಾಲಕರು ಮತ್ತು ತಾಲೂಕು ಅಧಿಕಾರಿಗಳಿಂದ ಕಿರುಕುಳ ಮತ್ತು ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ. ಸಚಿವರಿಗೆ ಬರೆದ ಪತ್ರದ ಸಾರಾಂಶ ಹೀಗಿದೆ..
ಬೆಂಗಳೂರು ನಗರದಲ್ಲಿರುವ ಆರ್.ಆರ್.ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸ್ತವ್ಯ ಮಾಡುತ್ತಿದ್ದಾರೆ. ಇಲ್ಲಿನ ಉಸ್ತುವಾರಿ ವಹಿಸಿಕೊಂಡವರು ಪ್ರತಿನಿತ್ಯ ಶೌಚಾಲಯ ಹಾಗೂ ವಿದ್ಯಾರ್ಥಿ ನಿಲಯದ ಆವರಣ ಸ್ವಚ್ಛಗೊಳಿಸುವಂತೆ ವಿದಾರ್ಥಿನಿಯರನ್ನು ಪೀಡಿಸುತ್ತಾರೆ. ಅದನ್ನು ವಿರೋಧಿಸಿದಲ್ಲಿ ಶೌಚಾಲಯಗಳಿಗೆ ಬೀಗ ಹಾಕುತ್ತಾರೆ ಮತ್ತು ಕೊಠಡಿಗಳಿಗೆ ನೀಡುವ ವಿದ್ಯುತ್ ಕಡಿತಗೊಳಿಸುತ್ತಾರೆ. ಅಲ್ಲದೆ, ವಿದ್ಯಾರ್ಥಿನಿಯರೇ ಅಡುಗೆ ಮಾಡುವಂತೆ ಒತ್ತಾಯಿಸುತ್ತಾರೆ. ಜೊತೆಗೆ ನಿಲಯ ಪಾಲಕರು ಅವರ ಸ್ವಂತ ಸೇವೆಯನ್ನು ಮಾಡಿಸಿಕೊಳ್ಳುವುದು ಹಾಗೂ ವಿದ್ಯಾರ್ಥಿ ನಿಲಯದ ಕೆಲ ವಸ್ತುಗಳನ್ನು ಅಕ್ರಮವಾಗಿ ತಮ್ಮ ಮನೆಗೆ ಸಾಗಾಟ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಗಾಳಿಪಟ ದಾರಕ್ಕೆ ಸಿಲುಕಿ ಕಂಬದಲ್ಲಿ ಒದ್ದಾಡುತ್ತಿದ್ದ ಕಾಗೆ; ಪ್ರಾಣ ರಕ್ಷಿಸಿದ ಹೆಡ್ ಕಾನ್ಸ್‌ಟೇಬಲ್‌ಗೆ ಸನ್ಮಾನ
ವಿದ್ಯಾರ್ಥಿನಿಯರ ಕೈಯಲ್ಲಿ ದೇಣಿಗೆ ರೂಪದಲ್ಲಿ ಬೆಲೆಬಾಳುವ ವಸ್ತುಗಳನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಕಿಟ್‌ಗಳನ್ನು ನೀಡದೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ 7 ತಿಂಗಳಿಂದ ಹಾಸಿಗೆಯನ್ನು ನೀಡದೆ ವಿದ್ಯಾರ್ಥಿಯರು ಕಬ್ಬಿಣದ ಮಂಚದ ಮೇಲೆ ಮಲಗುತ್ತಿದ್ದಾರೆ. ಈ ವಿಚಾರಗಳನ್ನು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸಹ ಯಾವುದೇ ರೀತಿ ಕ್ರಮ ಕೈಗೊಳ್ಳದೇ ದೂರು ನೀಡಿದ ವಿದ್ಯಾರ್ಥಿನಿಯರನ್ನು ನಿಲಯದಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳೂ ನಿಲಯ ಪಾಲಕರ ಜೊತೆ ಶಾಮಿಲಾಗಿ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಶಾಸಕಿ ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ.
ಮಹಿಳೆಯರ ಉನ್ನತ ಶಿಕ್ಷಣದಲ್ಲಿ ಹಿಂದುಳಿದಿರುವ ರಾಜ್ಯ ನಮ್ಮದು. ಈಗಾಗಲೇ ದಬ್ಬಾಳಿಕೆ ಎದುರಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಅನುಭವಗಳು ದುರಂತ. ಈ ವಿದ್ಯಾರ್ಥಿನಿಯರ ಮೇಲೆ ನಡೆದಿರುವಂತಹ ದುರ್ವರ್ತನೆ, ನಿಂದನೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದ ನಾನು ತೀವ್ರ ವಿಚಲಿತಳಾಗಿದ್ದೇನೆ, ನಿರಾಶೆಗೊಂಡಿದ್ದೇನೆ. ತಪ್ಪಿತಸ್ಥ ವಾರ್ಡನ್ ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಕಾನೂನಿನಡಿ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಸಚಿವರಿಗೆ ಸೌಮ್ಯ ರೆಡ್ಡಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಬಿಪಿಎಲ್ ಫಲಾನುಭವಿಗಳಿಗೆ ಸಿಹಿಸುದ್ದಿ : ಹೆಚ್ಚುವರಿ 1 ಕೆಜಿ ಅಕ್ಕಿ ವಿತರಿಸಲು ಸರ್ಕಾರ ಆದೇಶ