ಬೆಂಗಳೂರು: ಲೋಕಾಯುಕ್ತ ದಾಳಿಯಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಸಿಕ್ಕಿದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ತಡೆಯೊಡ್ಡಿ ಸಚಿವ ಎಂಟಿಬಿ ನಾಗರಾಜ್ ಸೇಡಿನ ಕ್ರಮ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ನಿನ್ನೆ (ಗುರುವಾರ) ಅಹೋರಾತ್ರಿ ಧರಣಿ ನಡೆಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಡಿಕೆಶಿ ಬೆಂಬಲ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. "ಇಷ್ಟು ದಿನ ಬಿಜೆಪಿಯವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಲೋಕಾಯುಕ್ತದವರೇ ಸಾಕ್ಷಿ ಕೊಟ್ಟಿದ್ದಾರೆ. ಈಗ ಯಾರು ರಾಜೀನಾಮೆ ಕೊಡುತ್ತಾರೆ?, ಮುಖ್ಯಮಂತ್ರಿ ರಾಜೀನಾಮೆ ಕೊಡ್ತಾರಾ?, ಸಚಿವರು ಅಥವಾ ನಿಗಮ ಮಂಡಳಿ ಅಧ್ಯಕ್ಷರು ಕೊಡ್ತಾರಾ" ಎಂದು ಪ್ರಶ್ನಿಸಿದರು.
ಉಗ್ರಪ್ಪ ಟೀಕೆ: "ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿ ದೇಶದ ಈವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳು ತಮ್ಮ ಇತಿಮಿತಿ ಅರಿತು ಕಾರ್ಯನಿರ್ವಹಿಸಿದ್ದಾರೆ" ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, "ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳು ಶತ್ರುಗಳಲ್ಲ. ಈ ದೇಶ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾಣಲು ಹಾಗೂ ದೇಶದ 139 ಕೋಟಿ ಜನರ ಹಿತರಕ್ಷಣೆ ಮಾಡುವ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲೆ ಇದೆ. 1947ರಿಂದ ಇಲ್ಲಿಯವರೆಗೆ ಆಗಿರುವ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಜವಾಬ್ದಾರಿ ಮೆರೆದಿದ್ದಾರೆ" ಎಂದರು.
"ಕಳೆದ ತಿಂಗಳು 28ರಂದು ಸುಪ್ರೀಂ ಕೋರ್ಟ್ ಪಂಜಾಬ್ ರಾಜಕೀಯ ಕುರಿತ ತೀರ್ಪಿನಲ್ಲಿ ಪ್ರಧಾನಿ, ಪ್ರತಿ ಪಕ್ಷದ ನಾಯಕರು, ರಾಷ್ಟ್ರಪತಿಗಳು ಸಂವಿಧಾನಾತ್ಮಕ ಕಾರ್ಯಗಳನ್ನು ಮಾಡಲು ಎಂದು ತಿಳಿಸಿದೆ. ಆದರೆ ನಮ್ಮ ಪ್ರಧಾನಿಗಳು ಕಳೆದ 8 ವರ್ಷಗಳಿಂದ ಸ್ಟೇಟ್ಸ್ಮನ್ ಶಿಪ್ ತೋರಲು ವಿಫಲರಾಗಿದ್ದಾರೆ. ಅವರು ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದ ಸಮಯದಲ್ಲಿ ಕೆಲವರು ನನ್ನ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ. ದೇಶದ ಪ್ರಧಾನಿಗಳು ಹೀಗೆ ಹೇಳಿದರೆ ವಿಶ್ವಕ್ಕೆ ಯಾವ ಸಂದೇಶ ರವಾನೆಯಾಗುತ್ತದೆ. ಭಾರತದಲ್ಲಿ ಪ್ರಧಾನಿಗೆ ರಕ್ಷಣೆ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಇದರಿಂದ ಭಾರತದ ಘನತೆಗೆ ಕುತ್ತು ಬರುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ತಡೆ ಹಿಡಿದ ಅನುದಾನ: ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ
"ಮೋದಿ ಅವರೇ ನಿಮ್ಮ ಸಮಾಧಿ ಮಾಡುವ ಪ್ರವೃತ್ತಿ ಯಾರಾದರೂ ಮಾಡುತ್ತಿದ್ದರೆ ನಿಮ್ಮ ಗುಪ್ತದಳ ಬಳಸಿಕೊಂಡು ಕೂಡಲೇ ಕೇಸ್ ದಾಖಲಿಸಿ ಬಂಧಿಸಿ. ಈ ಕೆಲಸ ಯಾಕೆ ಮಾಡಿಲ್ಲ? ಸಮಾಧಿ ಸಂಸ್ಕೃತಿ ನಿಜಕ್ಕೂ ಯಾರಿಗಾಗದರೂ ಇದ್ದರೆ ಬಿಜೆಪಿ ಹಾಗೂ ಪ್ರಧಾನಿಗಳಿಗೆ ಮಾತ್ರ. ಗಾಂಧಿ ಹತ್ಯೆ, ಗೋದ್ರಾ ಹತ್ಯಾಕಾಂಡ, ಸಿದ್ದರಾಮಯ್ಯ ಅವರನ್ನು ಕೊಲ್ಲಬೇಕು ಎಂದು ಹೇಳಿದ್ದು, ಇದೆಲ್ಲವೂ ನಿಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ. ಈ ದೇಶದ ಘನತೆ ಗೌರವದ ಬಗ್ಗೆ ಬದ್ಧತೆ ಇದ್ದರೆ ನಿಮ್ಮ ಸಮಾಧಿ ಕಟ್ಟಲು ಮುಂದಾಗಿರುವವರನ್ನು ಕೂಡಲೇ ಬಂಧಿಸಿ. ಇಲ್ಲದಿದ್ದರೆ ದೇಶದ ಜನರಿಗೆ ಕ್ಷಮೆ ಕೋರಬೇಕು" ಎಂದು ಆಗ್ರಹಿಸಿದರು.
ಬಿಜೆಪಿ, ಮೋದಿ ಮನುವಾದಿಗಳು: "ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ರಿ ಹಿಡಿದಿಲ್ಲ ಎಂಬ ವಿಚಾರಕ್ಕೆ ಮಾತನಾಡಿದ್ದಾರೆ. ಬಿಸಿಲಿನ ಸಮಯದಲ್ಲಿ ಸೋನಿಯಾ ಗಾಂಧಿ ಅವರ ಹೊರತಾಗಿ ಉಳಿದವರು ಗಾಧಿ ಟೋಪಿ ಧರಿಸಿದ್ದರು. ಬಿಸಿಲಿನ ಕಾರಣ ಅವರ ಭದ್ರತಾ ಸಿಬ್ಬಂದಿ ಛತ್ರಿ ಹಿಡಿದಿರುವುದನ್ನು ರಾಜಕೀಯವಾಗಿ ಬಳಸುತ್ತಾರೆ ಎಂದರೆ ಏನು ಹೇಳಬೇಕು. ಬಿಜೆಪಿ ಹಾಗೂ ಮೋದಿ ಮನುವಾದಿಗಳು. ಅವರು ಎಂದಿಗೂ ದಲಿತರ ಏಳಿಗೆಯನ್ನು ಬಯಸುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಂಗಾರು ಲಕ್ಷ್ಮಣ್ ಅವರನ್ನು ಮುಗಿಸಿದವರು ಯಾರು" ಎಂದು ಕೇಳಿದರು.
"ಮೋದಿ ಅವರು ಕರ್ನಾಟಕದವರಿಗೆ ಮಮತೆ ತೋರಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವದ ವಿರುದ್ಧ ಸಂಚು ಮಾಡಿಕೊಂಡು ಬಂದಿದ್ದರೆ ಅದು ಬಿಜೆಪಿಯವರು. ಬಿಜೆಪಿ ಕಟ್ಟಿದ ಎ.ಕೆ.ಸುಬ್ಬಯ್ಯ, ಶಿವಪ್ಪ, ನಂಜೇಗೌಡರು, ಬಂಗಾರಪ್ಪ ಅವರನ್ನು ಬಳಸಿಕೊಂಡು ಹೊರಗೆ ಹಾಕಿದರು. ಕೇಂದ್ರದ ಮಂತ್ರಿಯಾಗಿದ್ದ ಸದಾನಂದ ಗೌಡರನ್ನು ಏಕಾಏಕಿ ತೆಗೆದರು. ಎಸ್.ಎಂ.ಕೃಷ್ಣ ಅವರನ್ನು ಬಳಸಿಕೊಂಡು ಅಪಮಾನ ಮಾಡಿದ್ದಾರೆ. ಈ ಅಪಮಾನದ ಸಂಸ್ಕೃತಿ ಇದ್ದರೆ ಅದು ಬಿಜೆಪಿಗೆ ಮಾತ್ರ."
"ಮೋದಿ ಅವರು ಯಾವ ಮುಖ ಇಟ್ಟುಕೊಂಡು ದೇಶದಲ್ಲಿ ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಿದ್ದಾರೆ. ಇಂದು ಪ್ರಧಾನಿಗಳ ಅತ್ಯಂತ ಆತ್ಮೀಯರಾದ ಅದಾನಿ ಅವರ ಆಸ್ತಿ 2017-18ರಲ್ಲಿ 71,200 ಕೋಟಿ. 2022ಕ್ಕೆ 10.94 ಲಕ್ಷ ಕೋಟಿ ಆಗಿದೆ. ಈ ಬಗ್ಗೆ ಹಿಂಡನ್ ಬರ್ಗ್ ಸಂಸ್ಥೆ ವರದಿ ಬಂದ ನಂತರ ಅದಾನಿಯಿಂದ ದೇಶದ ಆರ್ಥಿಕ ಸಂಸ್ಥೆಗಳಿಗೆ 10 ಲಕ್ಷ ಕೋಟಿ ನಷ್ಟವಾಗಿದೆ. ಎಲ್ಐಸಿಗೆ 53 ಸಾವಿರ ಕೋಟಿ, ಎಸ್ಬಿಐಗೆ 24 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಈ ಬಗ್ಗೆ ತನಿಖೆಗೆ ರಾಜ್ಯ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿದಾಗ ಏನೂ ಆಗಿಲ್ಲ ಎಂದು ಪ್ರಧಾನಿ ತಿರಸ್ಕರಿಸಿದರು" ಎಂದರು.
"ಸುಪ್ರೀಂ ಕೋರ್ಟ್ ಇದರ ಘನತೆ ಅರಿತು ತಜ್ಞರ ಸಮಿತಿ ರಚಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಅಭಯ ಮನೋಹರ್, ಕೆ.ವಿ.ಕಾಮತ್, ಒ.ಪಿ.ಭಟ್, ನಂದನ್ ನೀಲೇಕಣಿ, ಜೆ.ಪಿ.ದೇವಧರ್ ಅವರ ಸಮಿತಿ ರಚಿಸಿ ದೇಶದ ಆರ್ಥಿಕತೆ ಮೇಲೆ ಆಗಿರುವ ದುಷ್ಪರಿಣಾಮದ ಬಗ್ಗೆ ಸಿಬಿಐ ತನಿಖೆ ಮೂಲಕ ನ್ಯಾಯಾಲಯಕ್ಕೆ 2 ತಿಂಗಳಲ್ಲಿ ವರದಿ ನೀಡಬೇಕು ಎಂದು ಹೇಳಿರುವುದು ಪ್ರಧಾನಿಗಳ ವಿಚಾರಧಾರೆಗೆ ಕಪಾಳಮೋಕ್ಷವಾಗಿದೆ. ಇಷ್ಟಾದರೂ ಬಿಜೆಪಿ ಅಥವಾ ಪ್ರಧಾನಿಗಳು ಚಕಾರ ಎತ್ತುತ್ತಿಲ್ಲ. ಪ್ರಧಾನಿ ಅವರಿಗೆ ನೈತಿಕತೆ ಇದ್ದರೆ, ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶದ ಜನ ಇವರಿಗೆ ಬರುವ ದಿನದಲ್ಲಿ ಪಾಠ ಕಲಿಸಬೇಕು ಎಂದು ಆಗ್ರಹ ಪೂರ್ವಕವಾಗಿ ಹೇಳಲು ಬಯಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: 40 ಲಕ್ಷ ರೂ ಲಂಚ ಪಡೆಯುವಾಗ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ