ಬೆಂಗಳೂರು: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಒಂದು ವಾರ ಕಲಾಪದಿಂದ ಅಮಾನತು ಶಿಕ್ಷೆಗೆ ಗುರಿಯಾಗಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ವಿಧಾನಸಭೆ ಮೊಗಸಾಲೆ ಪ್ರವೇಶಕ್ಕೆ ಮಾರ್ಷಲ್ಗಳು ಅವಕಾಶ ನಿರಾಕರಿಸಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿ ಮಾರ್ಷಲ್ಗಳಿಗೆ ಗದರಿ ಸಂಗಮೇಶ್ರನ್ನು ಒಳಗೆ ಕರೆದೊಯ್ದ ಘಟನೆ ನಡೆಯಿತು.
ಭೋಜನ ವಿರಾಮದ ನಂತರ ಕಲಾಪ ಆರಂಭಕ್ಕೂ ಮೊದಲು ವಿಧಾನಸಭೆ ಮೊಗಸಾಲೆಗೆ ತೆರಳಲು ಸಂಗಮೇಶ್ ಆಗಮಿಸಿದರು. ಆದರೆ ಅವರನ್ನು ಮೊಗಸಾಲೆ ಮುಖ್ಯ ದ್ವಾರದಲ್ಲೇ ತಡೆದ ಮಾರ್ಷಲ್ಗಳು ಪ್ರವೇಶಕ್ಕೆ ಅನುಮತಿ ನಿರಾಕರಿಸಿದರು. ಈ ವೇಳೆ ಶಾಸಕ ಸಂಗಮೇಶ್ ಮತ್ತು ಮಾರ್ಷಲ್ಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದೇಶದ ಪ್ರತಿ ತೋರಿಸಿ ಎಂದು ಶಾಸಕರು ಪಟ್ಟು ಹಿಡಿದರು. ಆದೇಶದ ಕಾಪಿ ಇಲ್ಲ ಆದರೆ ಸದನದಲ್ಲಿ ಅಮಾನತು ಮಾಡಿ ಆದೇಶವಾಗಿದೆ, ಹಾಗಾಗಿ ಬಿಡಲ್ಲ ಎಂದು ಅನುಮತಿ ನಿರಾಕರಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಗಮೇಶ್ ಏರು ದನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ನನಗೆ ಮೊಗಸಾಲೆ ಒಳಗೆ ಹೋಗಲು ಅವಕಾಶ ಕೊಡುತ್ತಿಲ್ಲ, ಸ್ಪೀಕರ್ ಆದೇಶ ಇನ್ನೂ ಬಂದೇ ಇಲ್ಲ, ಆದರೂ ನನ್ನನ್ನು ತಡೆದು ದೌರ್ಜನ್ಯ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಕೋಮುವಾದಿ ಆರ್ಎಸ್ಎಸ್ ಹಾಗೂ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಸ್ಪೀಕರ್ ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದರು.
ಅಷ್ಟರಲ್ಲಿ ಮೊಗಸಾಲೆ ಮುಖ್ಯದ್ವಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದರು. ಮಾರ್ಷಲ್ಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಶಾಸಕ ಸಂಗಮೇಶ್ ಪ್ರವೇಶಕ್ಕೆ ಅನುಮತಿ ನಿರಾಕರಿಸಲು ಆದೇಶದ ಕಾಪಿ ಎಲ್ಲಿ ಎಂದು ಪ್ರಶ್ನಿಸಿದರು, ಇವರನ್ನೇನು ಶಾಶ್ವತವಾಗಿ ಹೊರಹಾಕುತ್ತೀರಾ? ಇದೆಲ್ಲಾ ಒಳ್ಳೆಯ ಸಂಪ್ರದಾಯ ಅಲ್ಲ, ಹೋಗಿ ಆದೇಶದ ಕಾಪಿ ತನ್ನಿ ಎಂದು ಗದರಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ರಮೇಶ್ ಕುಮಾರ್, ಶಾಸಕ ಸಂಗಮೇಶ್ರನ್ನು ಒಳಹೋಗುವಂತೆ ಸೂಚಿಸಿದರು. ಇದಕ್ಕೂ ಅಡ್ಡಿ ಪಡಿಸಲು ಮಾರ್ಷಲ್ಗಳು ಮುಂದಾದರಾದರೂ ಅದಕ್ಕೆ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಅವಕಾಶ ನೀಡದೇ ತಮ್ಮೊಂದಿಗೆ ಸಂಗಮೇಶ್ರನ್ನು ಮೊಗಸಾಲೆಯ ಒಳಗೆ ಕರೆದೊಯ್ದರು.
ಇದನ್ನೂ ಓದಿ: ಬೆಂಗಳೂರು ಗುಣಮಟ್ಟದ ಜೀವನ ನಡೆಸಲು ನಂಬರ್ 1 ಸಿಟಿ