ಬೆಂಗಳೂರು: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ದೆಹಲಿಗೂ ಹೋಗಿಲ್ಲ, ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದಾರೆ. ಅವರು ಸಮಾಧಾನವಾಗಿಯೇ ಇದ್ದಾರೆ ಎಂದು ಬಿಜೆಪಿ ಶಾಸಕ ರಾಜು ಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 'ಪಿಚ್ಚರ್ ಅಭಿ ಬಾಕಿ ಹೇ' ಅಂತ ಆನಂದ್ ಸಿಂಗ್ ಹೇಳಿಕೆ ನೀಡಿರುವುದನ್ನು ನಾನು ನೋಡಿದೆ. ಅವರಿಗೆ ಫೋನ್ ಮಾಡಿ ಹೇಳಿದೆ. ಪಿಚ್ಚರ್ ಅಭಿ ಬಾಕಿ ಯೇ ಅಂತ ಹೇಳಿದ್ದೀರಾ ಕೊರೊನಾದಿಂದ ಥಿಯೇಟರ್ ಎಲ್ಲಾ ಬಂದ್ ಆಗಿದೆ ಎಂದು ಅವರಿಗೆ ತಮಾಷೆ ಮಾಡಿದ್ದೇನೆ ಎಂದರು.
ಆನಂದ್ ಸಿಂಗ್ ಅವರಿಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಇದ್ದಿದ್ದು ನಿಜ. ಆದರೆ ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನವಾಗಿದ್ದಾರೆ. ಅವರ ಕ್ಷೇತ್ರದಲ್ಲಿ ಧ್ವಜಾರೋಹಣ ಕೂಡ ಮಾಡಿದ್ರು. ಉಪರಾಷ್ಟ್ರಪತಿ ಅವರು ಬಂದಾಗ ಕೂಡ ಭೇಟಿ ಮಾಡಿದ್ರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಕೂಡ ಬರುತ್ತಾರೆ. ನಾವೂ ಕೂಡ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಖಾತೆ ಹಂಚಿಕೆಯಲ್ಲಿ ಅಸಮಾಧಾನ ಇರೋದು ಸತ್ಯ:
ಖಾತೆ ಹಂಚಿಕೆ ವಿಚಾರದಲ್ಲಿ ಅವರಿಗೆ ಅಸಮಾಧಾನ ಇರೋದು ಸತ್ಯ. ಆದರೆ ಅದನ್ನ ಹೈಕಮಾಂಡ್ ಬದಲಾಗಿ, ಮುಖ್ಯಮಂತ್ರಿಗಳ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದಾರೆ ಎಂದರು. ವಿಕಾಸಸೌಧದಲ್ಲಿ ಅವರ ಕೊಠಡಿಗೆ ಬೋರ್ಡ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವರಾದ ಮೇಲೆ ಬೋರ್ಡ್ ಹಾಕೋದು ಸರ್ಕಾರದ ಕೆಲಸ. ಅವರ ಕೆಲಸ ಅವರು ಮಾಡಿದ್ದಾರೆ ಎಂದು ಹೇಳಿದರು.
ನನಗೂ ಸಚಿವ ಸ್ಥಾನ ಸಿಗುವುದೆಂಬ ವಿಶ್ವಾಸ ಇತ್ತು. ಆದರೆ, ಸಿಗಲಿಲ್ಲ. ಅದಕ್ಕಾಗಿ ನಾನು ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುತ್ತೇನೆ ಎಂದು ರಾಜು ಗೌಡ ಇದೇ ವೇಳೆ ಹೇಳಿದ್ರು.