ಬೆಂಗಳೂರು: ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ನೆರೆ ರಾಜ್ಯಗಳಲ್ಲಿ ಸಿಲುಕಿರುವ ಕಲಬುರಗಿ ಜಿಲ್ಲೆಯ ಕಾರ್ಮಿಕರನ್ನು ವಾಪಸ್ ಕರೆ ತರವಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮೊದಲು ಕಲಬುರಗಿಯ ಕಾರ್ಮಿಕರನ್ನು ಕರೆತರುವಂತೆ ಕೋರಿ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಲಾಕ್ಡೌನ್ ಬಳಿಕ ನೆರೆ ರಾಜ್ಯಗಳಲ್ಲಿ ಸಿಲುಕಿರುವ ಕಲಬುರಗಿ ಮೂಲದ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರೆ ದುರ್ಬಲ ವರ್ಗದ ಜನರನ್ನು ಸುರಕ್ಷಿತವಾಗಿ ಜಿಲ್ಲೆಗೆ ವಾಪಸ್ ಕರೆತರಲು ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿಎಂ ನವಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಲಬುರಗಿ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಈಶಾನ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಜನ ಉದ್ಯೋಗ ಅರಸಿ ಮುಂಬೈ, ಹೈದರಾಬಾದ್ ಮತ್ತಿತರ ಮಹಾನಗರಗಳಿಗೆ ತೆರಳಿದ್ದಾರೆ. ಲಾಕ್ಡೌನ್ ಜಾರಿಯಾದ ನಂತರ ಊಟ ವಸತಿ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದು ಊರಿಗೆ ಮರಳಲು ಪರದಾಡುತ್ತಿದ್ದಾರೆ. ಅವರನ್ನು ಕರೆತರಲು ಸೂಕ್ತ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಕ್ರಮಕೈಗೊಂಡಿಲ್ಲ.
ಹೀಗಾಗಿ ವಲಸೆ ಹೋಗಿರುವವರನ್ನು ವಾಪಸ್ ಕರೆತರಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಕೋರಿದ್ದರು.