ಬೆಂಗಳೂರು: ವಿಧಾನಸೌಧದ ಸಿಎಂ ಕಚೇರಿಯಲ್ಲಿ ಇಂದು ತನ್ನನ್ನು ಭೇಟಿ ಮಾಡಿದ ಶಾಸಕ ಪ್ರೀತಂ ಗೌಡ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬುದ್ಧಿವಾದ ಹೇಳಿದ್ದಾರೆ ಎಂದು ಹೇಳಲಾಗ್ತಿದೆ.
ಸಚಿವ ಆರ್.ಅಶೋಕ್ ಸಲಹೆಯಂತೆ ಇಂದು ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಪ್ರೀತಂಗೌಡ, ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
ಸಚಿವ ಆರ್.ಅಶೋಕ್ ಮುಂದೆ ಖಾರವಾಗಿ ಮಾತನಾಡಿರುವ ಸಿಎಂ, ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡರನ್ನು ಭೇಟಿಯಾಗಿದ್ದು, ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅಪಾರ್ಥ ಕಲ್ಪಿಸುವುದು ಸರಿಯಲ್ಲ. ನನ್ನ ನಡೆ ಬಗ್ಗೆಯೇ ಅನುಮಾನ ಪಡುತ್ತೀರಾ? ನಿಮಗೆ ಅನುಮಾನಗಳಿದ್ದರೆ ನೇರವಾಗಿ ನನ್ನ ಬಳಿಗೆ ಬನ್ನಿ. ಮೊದಲು ಮಾಧ್ಯಮಗಳ ಮುಂದೆ ಹೋಗುವುದನ್ನು ನಿಲ್ಲಿಸಿ, ದೇವೇಗೌಡರ ಬಗ್ಗೆ ಗೊಂದಲ ಮೂಡಿಸಬೇಡಿ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.
ನೀವು ಇನ್ನೂ ಮೊದಲ ಬಾರಿ ಶಾಸಕರಾಗಿದ್ದೀರಿ. ನಿಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸಿ. ನಿಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ನನ್ನ ಬಳಿ ತನ್ನಿ. ಕ್ಷೇತ್ರದ ಕೆಲಸಗಳನ್ನ ಮಾಡಿಕೊಡೋಣ. ಇನ್ಮುಂದೆ ಈ ರೀತಿ ಮಾತುಗಳನ್ನು ಆಡಬೇಡಿ ಎಂದು ಪ್ರೀತಂ ಗೌಡ ಅವರಿಗೆ ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.