ಬೆಂಗಳೂರು : ಕೇವಲ ಪ್ರಚಾರಕ್ಕಾಗಿ ಪೇಜಾವರ ಶ್ರೀಗಳ ಬಗ್ಗೆ ಮಾತನಾಡುವ ಕೀಳು ಮಟ್ಟಕ್ಕೆ ಹಂಸಲೇಖ ಇಳಿದಿದ್ದು ಸರಿಯಲ್ಲ. ಈ ರೀತಿಯ ಹೇಳಿಕೆ ಇನ್ಮುಂದೆ ನೀಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ(MP Renukacharya) ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಭಾವನೆಗೆ ವಿರುದ್ಧವಾಗಿ ಕೀಳು ಮಟ್ಟದ ಹೇಳಿಕೆ ನೀಡಿ ಪ್ರಚಾರ ಪಡೆಯಲು ಉಡುಪಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ(Hamsalekha) ಮಾತನಾಡಿದ್ದಾರೆ.
ಪೇಜಾವರ ಶ್ರೀಗಳ(pejavara sri) ಬಗ್ಗೆ ಎಲ್ಲ ಧರ್ಮದವರಿಗೆ ಅಪಾರ ಗೌರವವಿದೆ. ಅವರನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದಾರೆ. ಅವರು ಅಮೂಲ್ಯವಾದ ರತ್ನ. ಅಂಥವರ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ ಎಂದ್ರು.
ಇದನ್ನೂ ಓದಿ:ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು: ಪ್ರತಾಪಸಿಂಹ ವಾಗ್ದಾಳಿ
ಕೇವಲ ಬಿಜೆಪಿ ಮಾತ್ರವಲ್ಲ ಎಲ್ಲರೂ ಇದನ್ನು ಖಂಡಿಸುತ್ತಿದ್ದಾರೆ. ಪೇಜಾವರ ಶ್ರೀಗಳು ದಲಿತರ ಮತ್ತು ಮುಂದುವರೆದವರ ನಡುವಿನ ಕಂದಕವನ್ನು ಸರಿಪಡಿಸಲು ದಲಿತರ ಕಾಲೋನಿಗಳಿಗೆ ಭೇಟಿ ಕೊಡುತ್ತಿದ್ದರು ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದರು.
ಅಂಥವರ ಬಗ್ಗೆ ಇವರು ಮಾತನಾಡುತ್ತಿದ್ದಾರೆ. ಅವರಿಗೆ ಯಾವ ರೀತಿ ಭಾಷೆ ಬಳಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಆದರೂ ಅಂತಹ ಭಾಷೆ ನಾನು ಬಳಸುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಕಲೆ-ಸಾಹಿತ್ಯ ಕಲಾವಿದರನ್ನು ನಾವು ಗೌರವಿಸುತ್ತೇವೆ. ನಮ್ಮ ಧರ್ಮ, ಪರಂಪರೆ, ಇತಿಹಾಸವನ್ನು ಒಮ್ಮೆ ನೋಡಿದರೆ ಕಲೆಗೆ ಒಂದು ಗೌರವವಿದೆ ಎನ್ನುವುದು ಸ್ಪಷ್ಟವಾಗಲಿದೆ. ಹಾಗಾಗಿ, ಇನ್ಮುಂದೆ ಈ ರೀತಿ ಹೇಳಿಕೆಗಳನ್ನು ಕೊಡಬಾರದು ಎಂದು ಎಚ್ಚರಿಕೆ ನೀಡಿದರು.