ಬೆಂಗಳೂರು: ಹರಪನಹಳ್ಳಿ ಸ್ವತಂತ್ರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ಗೆ ಕಿಸಾನ್ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಲತಾ ಅವರು ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಯಾವುದೇ ಶರತ್ತು ಇಲ್ಲದೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷದ ಏಳಿಗೆಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಇವರು ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್ ಪದಾಧಿಕಾರಿ ಹಿನ್ನೆಲೆಯಲ್ಲಿ ಹರಪನಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೇಳಿದ್ದು, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ದಿಸಿ 14 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಇವರಲ್ಲದೇ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳಾದ ಬಸವರಾಜ್ ವಿ ಶಿವಗಂಗಾ ಚನ್ನಗಿರಿ ಇಂದ 18 ಸಾವಿರ ಮತಗಳಿಂದ ಜಯಗಳಿಸಿದ್ದಾರೆ.
ಕುಡಚಿಯಿಂದ ಮಹೇಂದ್ರ ತಮ್ಮಣ್ಣವರ್ 25 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ತೇರದಾಳ ಅಭ್ಯರ್ಥಿ ಸಿದ್ದು ಕೊಣ್ಣೂರ 10 ಸಾವಿರ ಮತಗಳಿಂದ ಪರಾಜಿತವಾಗಿದ್ದರೂ ಉತ್ತಮ ಹೋರಾಟ ನೀಡಿದ್ದಾರೆ. ಇನ್ನು ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘಕ್ಕೆ ಬೆಂಬಲ ಹಿನ್ನೆಲೆಯಲ್ಲಿ ರೈತ ನಾಯಕರುಗಳು ಗೆದ್ದಿದ್ದಾರೆ.
ಕೃಷಿ ಪ್ರಧಾನ ರಾಜ್ಯದಲ್ಲಿ ರೈತ ಪರ ಹೋರಾಟ ನಡೆಸಿ ಪಕ್ಷವನ್ನು ಸಂಘಟಿಸಿ ಕಿಸಾನ್ ಕಾಂಗ್ರೆಸ್ನಲ್ಲಿ ಗೆದ್ದ ಶಾಸಕರುಗಳಿಗೆ ಮಂತ್ರಿ ಸ್ಥಾನ ನೀಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಇದೇ ಸಂದರ್ಭ ಸುರ್ಜೆವಾಲ ಅವರನ್ನು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.
ಡಿಕೆಶಿ ಸಿಎಂ ಆಗಿಸುವಂತೆ ಒತ್ತಾಯಿಸುವುದಾಗಿ ತೀರ್ಮಾನ: ಕೆಪಿಸಿಸಿ ಅಧ್ಯಕ್ಷನ ನಿವಾಸಕ್ಕೆ ಭೇಟಿ ನೀಡಿ ವಿವಿಧ ಒಕ್ಕಲಿಗ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಲು ಚಿಂತನೆ ನಡೆಸಿದ್ದಾರೆ. ಈ ಮಧ್ಯ ಸಾಕಷ್ಟು ಚರ್ಚೆ ನಡೆಸಿರುವ ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ನಾಯಕರನ್ನು ಸಹ ಈ ವಿಚಾರ ಬೆಂಬಲಿಸುವಂತೆ ಕೋರುವ ಸಾಧ್ಯತೆ ಇದೆ.
ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಿ ಕೆಲ ನಾಯಕರುಗಳು ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಶಿವಾನಂದ ವೃತ್ತ ಸಮೀಪದ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಭೇಟಿಯಾದ ಲತಾ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿಸುವುದೇ ಸೂಕ್ತವೆಂದು ಪಕ್ಷ ಸೇರ್ಪಡೆ: ಪಕ್ಷೇತರ ಅಭ್ಯರ್ಥಿಯಾಗಿ ಹರಪನಹಳ್ಳಿಯಿಂದ ಗೆಲುವು ಸಾಧಿಸಿರುವ ಇವರು, ತಮ್ಮ ತಂದೆ ಎಂಪಿ ಪ್ರಕಾಶ್ ಅವರು ಕಾಂಗ್ರೆಸ್ನಲ್ಲಿಯೇ ಇದ್ದ ಹಿನ್ನೆಲೆ ತಾವು ಸಹ ಕಾಂಗ್ರೆಸ್ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಾದರೆ ಕಾಂಗ್ರೆಸ್ ಬೆಂಬಲಿಸುವುದೇ ಸೂಕ್ತ ಎಂದು ಪಕ್ಷ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಸಿದ್ದು, ಡಿಕೆಶಿ ಕಟ್ಟಿ ಹಾಕುವ ಕೇಸರಿ ಪಡೆ ತಂತ್ರ ವಿಫಲ: ಪದ್ಮನಾಭನಗರ ಗೆದ್ದು ಅಶೋಕ್ ನಿಟ್ಟುಸಿರು!