ಹೊಸಪೇಟೆ (ವಿಜಯನಗರ): ಸಿಎಂ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರದಲ್ಲಿ ಮಂತ್ರಿಗಳು ಸಮಾಧಾನಗೊಂಡಿಲ್ಲ. ಇನ್ನು ಪ್ರವಾಹ ಹಾಗೂ ಕೊರೊನಾ ಭಯದಿಂದಿರುವ ಜನರಿಗೆ ಧೈರ್ಯ ಎಲ್ಲಿಂದ ತುಂಬುತ್ತಾರೆ ಎಂದು ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯ ಅಸಮಾಧಾನದಿಂದ ಕೆಲ ಸಚಿವರು ರಾಜೀನಾಮೆ ನೀಡುವ ಊಹಾಪೋಹಗಳು ಕೇಳಿ ಬರುತ್ತಿವೆ. ಇನ್ನು ಕೆಲಸ ಸಚಿವರು ಖಾತೆ ಅಸಮಾಧಾನದಿಂದ ದೆಹಲಿಗೆ ಓಡುತ್ತಿದ್ದಾರೆ. ಈ ಎಲ್ಲ ಅಂಶಗಳು ಒಳ್ಳೆಯ ಸರ್ಕಾರ ಎನ್ನುವುದಕ್ಕೆ ಪೂರಕವಲ್ಲ ಎಂದರು.
ಕೊರೊನಾ, ಪ್ರವಾಹ ಹಾಗೂ ಆರ್ಥಿಕ ತೊಂದರೆಗಳಿರುವ ಈ ಸಮಯದಲ್ಲಿ ಸರ್ಕಾರ ಬದಲಾವಣೆ ಮಾಡಲಾಯಿತು. ಆದರೆ, ಹೊಸ ಸರ್ಕಾರ ರಚನೆಯಾದರೂ ಶುದ್ಧ ಸರ್ಕಾರ ಎಂಬ ಭಾವನೆ ಜನರಲ್ಲಿ ಬಂದಿಲ್ಲ. ಬೇಗ ರಾಜಕೀಯ ನಾಯಕರು ಇವುಗಳನ್ನು ಸರಿಪಡಿಸಿಕೊಂಡು ಜನ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಎಂದರು.
ಆನಂದ ಸಿಂಗ್ಗೆ ಕಿವಿ ಮಾತು:
ಕೆಲಸ ಮಾಡುವುದಕ್ಕೆ ಮನಸ್ಸು ಇಲ್ಲದಿದ್ದರೆ ಮುಖ್ಯಮಂತ್ರಿ ಬಳಿ ಹೋಗಿ ನಿರ್ಣಯ ತಗೆದುಕೊಳ್ಳಲಿ, ಸಮಯ ವ್ಯರ್ಥವಾಗದೇ ನಿರ್ಣಕ್ಕೆ ಬರಬೇಕು. ಸರ್ಕಾರದ ಎಲ್ಲ ಇಲಾಖೆಯಲ್ಲೂ ಕೆಲಸ ಮಾಡುವ ಅವಕಾಶವಿರುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ಗೆ ಪರೋಕ್ಷವಾಗಿ ಕಿವಿ ಮಾತು ಹೇಳಿದರು.
ಶ್ರೀರಾಮುಲುಗೆ ಭ್ರಮೆ:
ಸಚಿವ ಶ್ರೀರಾಮುಲು ಯಾವುದೋ ಭ್ರಮೆಯಲ್ಲಿದ್ದಾರೆ. ರಾಯಚೂರು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಸೇರಿದಂತೆ ಎಲ್ಲೂರು ಭಾಗವಹಿಸಿದ್ದೆವು. ಅಲ್ಲಿಯೇ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಆದರೂ ಈ ರೀತಿ ಮಾತನಾಡಿದ್ದನ್ನು ನೋಡಿದ್ರೆ ಅವರು ಯಾವುದೋ ತಪ್ಪು ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದರು.