ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಧರಣಿಗೆ ಮುಂದಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮೀಸಲಾತಿ ವಿಷಯ ಪ್ರಸ್ತಾಪಿಸಿ, ನಾವು ಅನೇಕ ದಿನಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸ್ಪಷ್ಟ ಭರವಸೆ ಸಿಗುತ್ತಿಲ್ಲ. ಮೀಸಲಾತಿ ಕೊಡುತ್ತೀರೋ, ಇಲ್ಲವೋ ಎಂಬುದನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಿ ಎಂದು ಒತ್ತಾಯಿಸಿದರು.
ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದಿದ್ದೀರಿ. ಮುಖ್ಯಮಂತ್ರಿಗಳು ನಾಪತ್ತೆಯಾಗಿದ್ದಾರೆ. ಇನ್ನೊಂದು ಕಡೆ ಸಚಿವರೂ ಇಲ್ಲ. ನಮ್ಮನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದೀರಿ. ಕಳೆದ ಚುನಾವಣೆಯಲ್ಲಿ ನಮ್ಮ ಸಮುದಾಯ ನಿಮಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಇಂದು ಮುಖ್ಯಮಂತ್ರಿ ಸ್ಥಾನದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಕೂರುವುದಕ್ಕೆ ಪಂಚಮಸಾಲಿ ಸಮುದಾಯದ ಕೊಡುಗೆಯನ್ನು ಮರೆಯಬೇಡಿ ಎಂದರು.
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಅವರು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಪತ್ರ ಬರೆದಿದ್ದರು. ಸಚಿವ ಜಗದೀಶ ಶೆಟ್ಟರ್ ಅವರು ತಮ್ಮ ಸಮುದಾಯವನ್ನು ಸೇರ್ಪಡೆ ಮಾಡಿದ್ದಾರೆ. ಅವರ ಸಮುದಾಯದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ನಾನು ಒಪ್ಪುತ್ತೇನೆ ಎನ್ನುತ್ತಲೇ ಕಾಲೆಳೆದರು. ನಮ್ಮ ಸಮುದಾಯದ ಶ್ರೀಗಳು ಸುಮಾರು 712 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಸಮುದಾಯದವರು ಸೇರಿ ಸಮಾವೇಶ ನಡೆಸಿದ್ದಾರೆ. ಆದರೂ ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಬೇರೆಯವರ ರೀತಿ ಸುಖಾಸುಮ್ಮನೆ ಮಾತನಾಡುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದಾಗ ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿದರು. ಕೊನೆಗೆ ಬೊಮ್ಮಾಯಿ ಅವರ ಉತ್ತರದಿಂದ ತೃಪ್ತರಾಗದ ಯತ್ನಾಳ್ ಅವರು ಧರಣಿ ಮಾಡಲು ಮುಂದಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.