ಮಹದೇವಪುರ(ಬೆಂಗಳೂರು): ಗೌರಿ-ಗಣೇಶ ಹಬ್ಬದಲ್ಲಿದ್ದ ಸಿಲಿಕಾನ್ ಸಿಟಿಯ ಜನರಿಗೆ ಮಳೆರಾಯ ಭಾರಿ ಅವಾಂತರ ಸೃಷ್ಟಿ ಮಾಡಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಗರದ ಹಲವಡೆ ಭಾರಿ ಮಳೆಯಾಗಿದ್ದು ಮನೆಗಳಿಗೆ ಮತ್ತು ಅಪಾರ್ಟ್ಮೆಂಟ್ನ ನೆಲಮಹಡಿಗಳಿಗೆ ನೀರು ನುಗ್ಗಿದೆ. ಸದ್ಯ ಮಳೆ ಪ್ರಮಾಣ ಕಡಿಮೆಯಾದರೂ ಸಹ ಜನರ ಪರದಾಟ ಮಾತ್ರ ನಿಂತಿಲ್ಲ. ಹಲವು ತಗ್ಗು ಪ್ರದೇಶಗಳು ನೀರಿನಿಂದ ತುಂಬಿದ್ದು ಜನಜೀವನ ಅತಂತ್ರವಾಗಿದೆ.
ಅದೇ ರೀತಿ ಬೆಳ್ಳಂದೂರು ಹೊರ ವರ್ತುಲ ರಸ್ತೆಯ ಇಕೋ ಸ್ಪೇಸ್ ಬಳಿ ಮಳೆ ನೀರು ತುಂಬಿ ರಸ್ತೆಗೆ ಹರಿದಿತ್ತು. ಪರಿಣಾಮ ಬೆಂಗಳೂರಿನ ಹೊರವಲಯದಲ್ಲಿರುವ ಟೆಕ್ ಪಾರ್ಕ್‌ಗಳಿಗೆ ನಗರವನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆ ಮುಳುಗಡೆಯಾಗಿತ್ತು. ಸರ್ಜಾಪುರ ರಸ್ತೆಯಲ್ಲಿನ ರೈಂಬೋ ಡ್ರೈವ್ ಲೇಔಟ್ ಕೂಡ ಸಂಪೂರ್ಣ ಜಲಾವೃತಗೊಂಡಿತ್ತು. ಬೋಟ್ ಮೂಲಕ ಅಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸರ್ಜಾಪುರ ರಸ್ತೆ ಒಂದೇ ತಿಂಗಳಲ್ಲಿ ಮೂರನೇ ಬಾರಿ ಕೆರೆಯಂತಾಗಿದ್ದು ಅಚ್ಚರಿ ತಂದಿದೆ.
ಮಳೆ ಸುರಿದ ಪ್ರದೇಶಗಳಿಗೆ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ : ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ.. ವಿಡಿಯೋ ವೈರಲ್