ಮಹದೇವಪುರ: ಮಹದೇವಪುರದಲ್ಲಿ ಸುಮಾರು ಮುನ್ನೂರು ಮನೆಗಳಿರುವ ಆವಲಹಳ್ಳಿ ಪಂಚಾಯಿತಿಯ ಯುಜಿಡಿ ಒಳ ಚರಂಡಿ ಕಾಮಗಾರಿ ಹಾಗೂ 6.5 ಕೋಟಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಮಹದೇವಪುರ ಕ್ಷೇತ್ರದ ಆವಲಹಳ್ಳಿಯಲ್ಲಿ ಒಳ ಚರಂಡಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ನಂತರ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳ ಹಳ್ಳಿಗಳಲ್ಲಿ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಇನ್ನು ಸ್ವಚ್ಛ ಭಾರತ ಸೇರಿದಂತೆ ವಿವಿಧ ಇಲಾಖೆಗಳಿಂದ 6.5 ಕೋಟಿ ವೆಚ್ಚದಲ್ಲಿ 2 ಹಂತಗಳ ಕಾಮಗಾರಿ ಕೈಗೊಂಡಿದ್ದು, ಆವಲಹಳ್ಳಿ ಗ್ರಾಮದಲ್ಲಿ ಮುಂದಿನ 30 ವರ್ಷಗಳ ಜನಸಂಖ್ಯೆ ಆಧರಿಸಿ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿ ವೇಳೆಯಲ್ಲಿ ಮನೆಗಳಿಗೆ ಕುಡಿಯುವ ನೀರಿನ ಪೈಪ್ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ನಂತರ ಮಾತನಾಡಿದ ಆವಲಹಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ದೇವರಾಜ್, ಈ ಪ್ರದೇಶದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದು, ಒಳಚರಂಡಿ ಕಾಮಗಾರಿಗೆ ವಿವಿಧ ಅನುದಾನಗಳಲ್ಲಿ ಚಾಲನೆ ನೀಡಲಾಗಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ ಆರೋಗ್ಯ ಕಾಪಾಡುವ ಉದ್ದೇಶದಿಂದ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದ್ದು, 4ರಿಂದ 5 ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದರು.