ಬೆಂಗಳೂರು: ಕೇಂದ್ರ ಸರ್ಕಾರದ ನ್ಯಾಷನಲ್ ಮೆಡಿಕಲ್ ಕಮಿಷನ್ ಮಸೂದೆಗೆ ವೈದ್ಯಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಗಮನ ಸೆಳೆಯಲು ಭಾರತೀಯ ವೈದ್ಯಕೀಯ ಸಂಘ ಇಂದು ರಾಷ್ಟ್ರವ್ಯಾಪಿ ಹೊರರೋಗಿಗಳ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಈ ಮುಷ್ಕರಕ್ಕೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವು ಕಡೆ ಆಸ್ಪತ್ರೆಗಳಲ್ಲಿ ವೈದ್ಯರು ಎಂದಿನಂತೆ ಕೆಲಸಕ್ಕೆ ಹಾಜರ್ ಆಗಿದ್ದರು. ಕಿಮ್ಸ್, ಎಂ.ಎಸ್. ರಾಮಯ್ಯ, ಫೋಟಿಸ್, ಅಪೋಲೊ ಆಸ್ಪತ್ರೆ ಸೇರಿದಂತೆ ಕೊಲಂಬಿಯಾ ಏಷ್ಯಾ, ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಎಂದಿನಂತೆ ಒಪಿಡಿ ತೆರೆದಿತ್ತು. ಎನ್ಎಂಸಿ ಮಸೂದೆಯ ಸಂಬಂಧ ಸಾಕಷ್ಟು ಸಲ ವೈದ್ಯರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಸಲವೂ ಅಂದುಕೊಂಡಂತೆ ಪ್ರತಿಕ್ರಿಯೆಗೆ ಸರಿಯಾದ ಬೆಂಬಲ ಸಿಗದೇ ಇರೋದು ಕಂಡು ಬಂದಿದೆ.
ಸತತ ಎರಡು ವರ್ಷಗಳಿಂದ ಈ ಕಾಯ್ದೆಯನ್ನು ವಿರೋಧಿಸುತ್ತ ಬಂದಿದ್ದೇವೆ. ದೆಹಲಿಯಲ್ಲಿ ಸಾಕಷ್ಟು ಸಲ ಸಭೆಗಳು ನಡೆದು, ಕಾಯ್ದೆಯಲ್ಲಿರುವ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸಿದರೂ ಯಾವುದೇ ಉಪಯೋಗವಾಗಿಲ್ಲ ಅಂತ ಐಎಂಎ ಸೆಕ್ರೆಟರಿ ಡಾ. ಶ್ರೀನಿವಾಸ್ ತಿಳಿಸಿದರು.