ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ದುಬಾರಿ ಬೆಲೆಯ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸತೀಶ್ ಮನೆಗೆ ಗೃಹ ಸಚಿವರ ಭೇಟಿ: ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಗೃಹ ಸಚಿವ ಆರಗ ಜ್ಞಾನೇಂದ್ರ ಶಾಸಕ ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೃಹ ಸಚಿವರ ಜೊತೆಗೆೆ ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಈ ಘಟನೆಯಿಂದ ನೋವಾಗಿದೆ. ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಘಟನೆ ಸಾಮಾನ್ಯ ವಿಚಾರವಲ್ಲ" ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ನಗರ ಆಗ್ನೇಯ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೊಮ್ಮನಹಳ್ಳಿ, ತಿಲಕ್ ನಗರ ಹಾಗೂ ಸುದ್ದುಗುಂಟೆಪಾಳ್ಯ ಇನ್ಸ್ಟೆಕ್ಟರ್ಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ. ನಿಯೋಜಿಸಲಾಗಿರುವ ತಂಡಗಳು ಮನೆಯಲ್ಲಿ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಪರಿಚಯಸ್ಥರೇ ಕೃತ್ಯ ಎಸಗಿರಬಹುದು ಎಂದು ಪ್ರಾಥಮಿಕ ತನಿಖೆ ವೇಳೆ ಪೊಲೀಸರು ಕಂಡುಕೊಂಡಿದ್ದಾರೆ.
ಸ್ಥಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು: ಬೊಮ್ಮನಹಳ್ಳಿ ಪೊಲೀಸರು ಶಾಸಕರ ಹೇಳಿಕೆ, ಮನೆಯ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್ಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಧ್ಯರಾತ್ರಿ ಕಾರಿನ ಬ್ಯಾಟರಿ ಬ್ಲಾಸ್ಟ್ ಆದಾಗ ಕೃತ್ಯ ಗೊತ್ತಾಗಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಶೇ.70 ರಷ್ಟು ಕಾರಿಗೆ ಹಾನಿಯಾಗಿದೆ ಎಂದು ಮನೆಯ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಮನೆ ಹಿಂಬಾಗಿಲಿನಿಂದ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿ ಸಾಕಿದ್ದ ನಾಯಿಗಳು ಯಾವುದೇ ಶಬ್ಧ ಮಾಡಿರಲಿಲ್ಲ ಎಂಬುದನ್ನು ಅರಿತ ಪೊಲೀಸರು ಮೇಲ್ನೊಟ್ಕಕ್ಕೆ ಪರಿಚಯಸ್ಥರೇ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಗುಮಾನಿ ವ್ಯಕ್ಯಪಡಿಸಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ: ನಿನ್ನೆ ಬೇಗೂರು ಕೆರೆಯ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡದಂತೆ ಕೋರ್ಟ್ನಿಂದ ಅನ್ಯಧರ್ಮದವರು ತಡೆಯಾಜ್ಞೆ ತಂದಿದ್ದರು. ಹಾಗಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಆಗ ಸತೀಶ್ ರೆಡ್ಡಿ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಿದ್ದರು. ಕೋರ್ಟ್ ವಿಚಾರ ಇರುವುದರಿಂದ ಕಾನೂನು ರೀತಿಯಲ್ಲಿ ಬಗೆಹರಿಸುವ ಕೆಲಸ ಮಾಡಿ ಎಂದು ಹೇಳಿದ್ದರು. ಈ ವಿಚಾರವಾಗಿ ಕೃತ್ಯ ನಡೆದಿರಬಹುದೆಂದು ಶಂಕಿಸಿ ತನಿಖೆ ಮಾಡಲಾಗುತ್ತಿದೆ. ಎರಡನೇದಾಗಿ ರಾಜಕೀಯ ವೈಷಮ್ಯ ಹಾಗೂ ಹಿತ ಶತ್ರುಗಳಿಂದ ಈ ಘಟನೆ ನಡೆದಿದೆಯಾ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.