ಬೆಂಗಳೂರು: ಸಾಮಾನ್ಯವಾಗಿ ಚುನಾವಣೆ ಬಂದಾಗ ಮತದಾರರನ್ನು ಸೆಳೆಯಲು ಉಚಿತ ಕೊಡುಗೆ ಘೋಷಿಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಆದರೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಗಾಗಲೇ ಸಮಾವೇಶ, ಚುನಾವಣಾ ಪ್ರಚಾರದ ರ್ಯಾಲಿಗಳಲ್ಲಿ ಪೈಪೋಟಿಗಿಳಿದವರಂತೆ ಮೂರು ಪಕ್ಷಗಳು ಮತದಾರರ ಮಂದೆ ಇಡುತ್ತಿವೆ. ಉಚಿತ ಘೋಷಣೆಗಳನ್ನು ನೀಡುವುದರಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಲ್ಪಸಂಖ್ಯಾತ ಮತ ಸೆಳೆಯಲು ಜೆಡಿಎಸ್ ತಂತ್ರ: ಈಗಾಗಲೇ ನಾಮಪತ್ರ ಸಲ್ಲಿಸುವ ಕಾರ್ಯ ಮುಗಿದಿದೆ. ರಾಜ್ಯದೆಲ್ಲೆಡೆ ಚುನಾವಣಾ ಪ್ರಚಾರ ಜೋರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 211 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, 207 ನಾಮಪತ್ರಗಳು ಕ್ರಮಬದ್ಧವಾಗಿವೆ. ಜೆಡಿಎಸ್ ಈ ಬಾರಿ 23 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದೆ. ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಜೆಡಿಎಸ್ ಮುಂದಾಗಿದೆ.
ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯುವರೇ?: ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಸಿ ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಉದ್ದೇಶ ಈಡೇರುವುದೇ? ಎಂಬ ಪ್ರಶ್ನೆ ಎದ್ದಿದೆ. ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯುವರೇ? ಎಂಬ ಜಿಜ್ಞಾಸೆಯೂ ಮೂಡಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಅಲ್ಪಸಂಖ್ಯಾತರು ಈ ಬಾರಿಯ ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸುವುದಿಲ್ಲ. ಜೆಡಿಎಸ್‌ನ ಜಾತ್ಯತೀತ ನಿಲುವಿನ ಬಗ್ಗೆ ವಿಶ್ವಾಸ ಮೂಡುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚು ಅವಕಾಶ ಕಾಂಗ್ರೆಸ್ ಕಲ್ಪಿಸಿರುವುದರಿಂದ ಇತರ ಕ್ಷೇತ್ರಗಳಲ್ಲೂ ಜೆಡಿಎಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿಗಿಳಿದಿವೆ. ಮುಸ್ಲಿಂ ಸಮುದಾಯ ಕೊನೆ ಗಳಿಗೆಯಲ್ಲಿ ಯಾರ ಕಡೆ ಒಲವು ತೋರುತ್ತಾರೆ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಅಲ್ಪಸಂಖ್ಯಾತರ ಮತ ಕೈತಪ್ಪಿದ್ದರಿಂದ ಹಿಂದೆ ಜೆಡಿಎಸ್‌ಗೆ ಹಿನ್ನೆಡೆ: ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ದೊರಕದೇ ಜೆಡಿಎಸ್‌ಗೆ ಹಿನ್ನಡೆ ಉಂಟಾಗಿತ್ತು ಎಂಬ ವಾದವಿದೆ. ಅದಕ್ಕಾಗಿ ಈ ಬಾರಿ ಅಲ್ಪಸಂಖ್ಯಾತರಿಗೆ ಹೆಚ್ಚು ಆದ್ಯತೆ ನೀಡಿ ಕಣಕ್ಕಿಳಿಸಲಾಗಿದೆ. 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ತಲುಪಲು ಅಲ್ಪಸಂಖ್ಯಾತರ ಮತಗಳು ಅನಿವಾರ್ಯ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ, ಅದಕ್ಕಾಗಿ ಮಾಜಿ ಸಚಿವ ಸಿ ಎಂ ಇಬ್ರಾಹಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಜ್ಯಾತ್ಯತೀತ ನಿಲುವಿಗೆ ಜೆಡಿಎಸ್ ಬದ್ಧವಾಗಿದ್ದು, ಕೋಮುವಾದಿ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ ಎಂಬ ಸಂದೇಶವನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಮೂಲಕ ಸಂದೇಶ ರವಾನಿಸಿದೆ.
ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹೊಂದಿರುವ ಜೆಡಿಎಸ್, ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮತದಾರರ ಮನಗೆಲ್ಲಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಅಭ್ಯರ್ಥಿಗಳ ಆಯ್ಕೆಯು ಮುಖ್ಯವಾಗಿದೆ. ಅಲ್ಪಸಂಖ್ಯಾತರಷ್ಟೇ ಅಲ್ಲ, ಹಿಂದುಳಿದ ಹಲವು ಸಮುದಾಯಗಳು ಮತ್ತು ಸಣ್ಣ, ಸಣ್ಣ ಸಮುದಾಯಗಳಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಮೂಲಕ ಜಾತ್ಯತೀತ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಸಾಬೀತು ಪಡಿಸುವ ಯತ್ನವನ್ನು ಜೆಡಿಎಸ್ ಮಾಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಈ ಆರೋಪವನ್ನೇ ನಂಬಿದ ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯಲಿಲ್ಲ. ಹಾಗಾಗಿ ನಮಗೆ ಭಾರಿ ಹಿನ್ನಡೆ ಉಂಟಾಗಿತ್ತು. ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪದಲ್ಲಿ ಯಾವುದೇ ಹುರುಳಿರಲಿಲ್ಲ. ಚುನಾವಣೆ ನಂತರ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದೇವೆ. ಇದು ಅಲ್ಪಸಂಖ್ಯಾತರಿಗೆ ಗೊತ್ತಾಗಿದೆ ಎಂಬುದು ಜೆಡಿಎಸ್ ನಾಯಕರ ಅಭಿಪ್ರಾಯವಾಗಿದೆ.
ಜೆಡಿಎಸ್ ಈಗಲೂ ತನ್ನ ಜಾತ್ಯತೀತ ನಿಲುವಿಗೆ ಬದ್ಧವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳ ಮೂಲಕ ಮಾಡಲಾಗುತ್ತಿದೆ. ಇದರಿಂದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ದಳಪತಿಗಳು ಹೊಂದಿದ್ದಾರೆ.
ಜೆಡಿಎಸ್ ಟಿಕೆಟ್ ನೀಡಿಕೆಯಲ್ಲೂ ಜಾತ್ಯತೀತ ನಿಲುವು: 2023 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ವಲಸಿಗರಿಗೆ ಮಣೆ ಹಾಕಿರುವಂತೆಯೇ, ಅಲ್ಪಸಂಖ್ಯಾತರಿಗೂ ಹೆಚ್ಚಿನ ಆದ್ಯತೆ ನೀಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ದೊರೆಯದ ಹಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದಿಂದ ಅಭ್ಯರ್ಥಿಗಳು ಸೋಲು ಕಂಡಿದ್ದರು ಎಂಬುದು ಜೆಡಿಎಸ್ ನಾಯಕರ ವ್ಯಾಖ್ಯಾನ. ಕಡಿಮೆ ಅಂತರದಿಂದ ಸೋತಿದ್ದ ಕ್ಷೇತ್ರಗಳಲ್ಲಿ ಈ ಬಾರಿ ಅನುಕೂಲವಾಗಲಿದೆ. ಕಳೆದ ಬಾರಿಯಂತೆ ಈ ಬಾರಿ ಅಲ್ಪಸಂಖ್ಯಾತರು ಜೆಡಿಎಸ್ ಅನ್ನು ತಿರಸ್ಕರಿಸುವುದಿಲ್ಲ. ಅದಕ್ಕಾಗಿ ಟಿಕೆಟ್ ನೀಡಿಕೆಯಲ್ಲೇ ಜಾತ್ಯತೀತ ನಿಲುವನ್ನು ಸಾಬೀತು ಪಡಿಸಲಾಗಿದೆ ಎಂಬುದು ಜೆಡಿಎಸ್ ವಾದ.
ರಾಷ್ಟ್ರೀಯ ಪಕ್ಷಗಳಂತೆ ಜೆಡಿಎಸ್ ಕೂಡ ಪ್ರಬಲ ಸಮುದಾಯಗಳಾದ ಒಕ್ಕಲಿಗರಿಗೆ 55, ಲಿಂಗಾಯತರಿಗೆ 41 ಕ್ಷೇತ್ರಗಳಲ್ಲಿ ಆದ್ಯತೆ ನೀಡಿ ಅವಕಾಶ ಕಲ್ಪಿಸಿದೆ. 33 ಕ್ಷೇತ್ರಗಳಲ್ಲಿ ಎಸ್ಸಿ, 13 ಕ್ಷೇತ್ರಗಳಲ್ಲಿ ಎಸ್ಪಿ, 31 ಕ್ಷೇತ್ರಗಳಲ್ಲಿ ಇತರ ಇತರ ಹಿಂದುಳಿದ ವರ್ಗದವರನ್ನು ಕಣಕ್ಕಿಳಿಸಿದೆ. ಇದಲ್ಲದೆ ಮಹಿಳೆಯರು 13, ಕುರುಬರು-10, ಈಡಿಗ-7 ಬಂಟ್ಸ್-4, ಮರಾಠ-5 ಕ್ಷೇತ್ರಗಳಲ್ಲಿ ಅವಕಾಶ ನೀಡಿದ್ದಾರೆ. ಉಪ್ಪಾರ ಮತ್ತು ಬಲಿಜ ಸಮುದಾಯಗಳಿಗೆ ತಲಾ ಎರಡು ಕ್ಷೇತ್ರಗಳಲ್ಲಿ ಅವಕಾಶ ಕಲಿಸಿದೆ. ಉಳಿದಂತೆ ನೇಕಾರ, ಮಡಿವಾಳ, ಕೋಲಿ, ಕ್ಷತ್ರಿಯ, ತಿಗಳ, ಕುಂಬಾರ, ಕೊಂಕಣಿ, ಅಕ್ಕಸಾಲಿಗ, ನಾಯ್ಡು, ಜೈನ, ಬ್ರಾಹ್ಮಣ, ರೆಡ್ಡಿ, ಕೊಡವ ಹಾಗೂ ಜಿಎಸ್‌ಐ ಸಮುದಾಯದ ಅಭ್ಯರ್ಥಿಗಳನ್ನು ತಲಾ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಕಣಕ್ಕಿಳಿಸಿದೆ.
ಏಳು ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ನೀಡಿದೆ. ಹಳೇ ಮೈಸೂರು ಭಾಗದ ಜೊತೆ ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲೂ ಹೆಚ್ಚು ಸ್ಥಾನ ಗಳಿಸಲು ಜೆಡಿಎಸ್ ಕಸರತ್ತು ನಡೆಸುತ್ತಿದೆ. ಒಟ್ಟಾರೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್, ಇನ್ನಿಲ್ಲದ ತಂತ್ರಗಾರಿಕೆ ಮಾಡುತ್ತಿದೆ.
ಇದನ್ನೂಓದಿ:ರಾಜ್ಯ ನಾಯಕರ ಜೊತೆ ಅಮಿತ್ ಶಾ ಮಿಡ್ ನೈಟ್ ಮೀಟಿಂಗ್: ಬಿಜೆಪಿ ಚಾಣಕ್ಯ ನೀಡಿದ ಸಲಹೆಗಳೇನು ಗೊತ್ತಾ?