ಬೆಂಗಳೂರು : ಬರ ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿಯಂತಹ ಯೋಜನೆಗಳಿಂದ ರಾಜ್ಯದ ಬಯಲು ಸೀಮೆಯ 164 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು.
ವಿಕಾಸಸೌಧದಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ 6ನೇ ನೀರಾವರಿ ಗಣತಿಯ ಕುರಿತು 2017-18 ರಲ್ಲಿ ಸಮೀಕ್ಷೆ ನಡೆಸಲಾಗಿದೆ. ಆ ವರ್ಷದಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಬರದ ಪರಿಸ್ಥಿತಿ ಇತ್ತು. ನಂತರದ ವರ್ಷಗಳಲ್ಲಿ ರಾಜ್ಯಾದ್ಯಂತ ಕೈಗೊಂಡಿರುವ ಕೆರೆಗಳನ್ನು ತುಂಬುವ ಏತ ನೀರಾವರಿ ಯೋಜನೆಗಳಿಂದಾಗಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂತರ್ಜಲ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 700 ಕೆರೆಗಳನ್ನು ನದಿಗಳಿಂದ, ಕಾಲುವೆಗಳಿಂದ ಹಾಗೂ ಬೆಂಗಳೂರು ನಗರದಲ್ಲಿ ಲಭ್ಯವಿರುವ ಎರಡನೇ ಹಂತದ ಸಂಸ್ಕರಿಸಿದ ನೀರು ಬಳಸಿ ತುಂಬಿಸಲು ಕ್ರಮವಹಿಸಲಾಗಿದೆ. ಇವುಗಳಲ್ಲಿ ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಏತ ನೀರಾವರಿ ಯೋಜನೆಗಳು ಪ್ರಮಖವಾದವುಗಳು. ಇದಲ್ಲದೇ, ರಾಜ್ಯಾದ್ಯಂತ ಕೈಗೊಂಡಿರುವ ಹಲವಾರು ಯೋಜನೆಗಳ ಹಿನ್ನೆಲೆಯಲ್ಲಿ ರಾಜ್ಯದ 164 ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ (ಜುಲೈ 2023 ರ ಅಂಕಿ - ಅಂಶ). ಮಲೆನಾಡಿನ ತಾಲೂಕುಗಳಿಗೆ ಹೋಲಿಸಿದಲ್ಲಿ ಬಯಲು ಸೀಮೆಯ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಾಗಿದೆ" ಎಂದು ಹೇಳಿದರು.
2022 -23 ನೇ ಉಲ್ಲೇಖಿತ ವರ್ಷವನ್ನಾಧರಿಸಿ ಕೇಂದ್ರ ಸರ್ಕಾರದ 7 ನೇ ಸಣ್ಣ ನೀರಾವರಿ ಗಣತಿ ಕಾರ್ಯವು ಸದ್ಯದಲ್ಲೇ ಪ್ರಾರಂಭವಾಗಲಿದೆ. 2017 - 18 ನೇ ಸಾಲಿನ ನಂತರದ ಸಣ್ಣ ನೀರಾವರಿ ಯೋಜನೆಗಳ ಸಾಧನೆ 7 ನೇ ನೀರಾವರಿ ಗಣತಿಯಲ್ಲಿ ಪರಿಗಣಿಸಲ್ಪಡುತ್ತವೆ. ಹಾಗೂ ರಾಜ್ಯದ ಉತ್ತಮ ಸಾಧನೆ ಇಲ್ಲಿ ಪ್ರತಿಫಲವಾಗುವ ನಿರೀಕ್ಷೆಯಿದೆ ಎಂದರು.
ಬರ ಪರಿಸ್ಥಿತಿ ನಿರ್ವಹಣೆಗಾಗಿ ಇಲಾಖೆ ಸಜ್ಜು : ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3,673 ಕೆರೆಗಳಿವೆ. ಏತ ನೀರಾವರಿ ಯೋಜನೆಗಳ ಮೂಲಕ ಇವುಗಳನ್ನು ತುಂಬಿಸುವ ಕಾರ್ಯ ನಡೆಯುತ್ತದೆ. ಈ ಬಾರಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ತುಂಬಿಲ್ಲ. ಅಂಕಿ- ಅಂಶಗಳನ್ನು ಪರಿಗಣಿಸಿದಲ್ಲಿ ಶೇಕಡಾ 30 ಕ್ಕೂ ಕಡಿಮೆ ನೀರು ಶೇಖರಣೆ ಇರುವ ಕೆರೆಗಳ ಸಂಖ್ಯೆ 334. ಇದರ ಶೇಕಡಾವಾರು ಗಮನಿಸಿದಲ್ಲಿ ಇದು ಕೇವಲ 9%. ಆಗಸ್ಟ್ 24 ರಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ವಿಸ್ತ್ರತ ಸಭೆ ನಡೆಸಿ ವಸ್ತುಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳ ತೂಬುಗಳಿಂದ ಕೃಷಿ ಚಟುವಟಿಕೆಗಳಿಗೆ ನೀರನ್ನು ಹರಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ. ಇದೇ ಸಮಯದಲ್ಲಿ ಕುಡಿಯುವ ನೀರಿನ ಅವಶ್ಯಕತೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ಪಿಎಂಕೆಎಸ್ವೈ ಮತ್ತು ಅಟಲ್ ಭೂಜಲ ಯೋಜನೆಯ ಅಡಿ ಕೇಂದ್ರ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಪಿಎಂಕೆಎಸ್ವೈ ಯೋಜನೆ ಅಡಿ ಕೇಂದ್ರ ಸರ್ಕಾರ ಶೇಕಡಾ 60 ರಷ್ಟು, ರಾಜ್ಯ ಸರ್ಕಾರ ಶೇಕಡಾ 40 ರಷ್ಟು ಅನುದಾನ ನೀಡುವ ಯೋಜನೆ ಅಡಿ ಕೇಂದ್ರ ಸರ್ಕಾರ 439 ಕೋಟಿ ರೂಪಾಯಿಗಳ 138 ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಇನ್ನೂ 1,892 ಕೋಟಿ ರೂಪಾಯಿಗಳ ವೆಚ್ಚದ 851 ಕಾಮಗಾರಿಗಳ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಕಾರ್ಯ ಬಾಕಿಯಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಶೇ. 100 ರಷ್ಟು ಅನುದಾನ ನೀಡುವ ಯೋಜನೆಯಾಗಿರುವ ಅಟಲ್ ಭೂಜಲ ಯೋಜನೆ ಅಡಿ 2020 ರಿಂದ 5 ವರ್ಷಗಳ ಬಳಕೆಗಾಗಿ 1007 ಕೋಟಿ ರೂಪಾಯಿಗಳನ್ನು ನೀಡಿದೆ. ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ ಮತ್ತು ವಾಟರ್ ಶೇಡ್ ಇಲಾಖೆಗಳು ಸಮನ್ವಯದಿಂದ 14 ಜಿಲ್ಲೆಗಳ 41 ತಾಲೂಕುಗಳ 1199 ಗ್ರಾಮ ಪಂಚಾಯಿತಿಗಳಲ್ಲಿ ಅಂತರ್ಜಲ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 50 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ: ಇಸ್ರೋ ವಿಜ್ಞಾನಿಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಸನ್ಮಾನಿಸಲಾಗುವುದು. ಇಲಾಖೆಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಯಕ್ರಮದ ರೂಪ ರೇಷೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಕೆರೆ ತುಂಬಿಸುವ, ಬ್ಯಾರೇಜ್ ನಿರ್ಮಿಸುವ ಕಾರ್ಯಗಳಿಗೆ ಒತ್ತು ನೀಡಿ: ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ
ಚಂದ್ರಯಾನ 3 ಸಫಲತೆಗೆ ಕಾರಣೀಭೂತರಾದ ವಿಜ್ಞಾನಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಇಲಾಖೆಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದೇನೆ. ಸಭೆಯಲ್ಲಿ ಕಾರ್ಯಕ್ರಮದ ರೂಪು ರೇಷೆಗಳು ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಯಿತು. ಇಸ್ರೋ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದ ಸಮಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಅಂತರಿಕ್ಷ ಕ್ಷೇತ್ರದಲ್ಲಿ ಭಾರತದ ಸಾಧನೆ ಪ್ರದರ್ಶನವನ್ನು ಆಯೋಜಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು.