ಬೆಂಗಳೂರು: ರಾಜ್ಯದಲ್ಲಿ 4 ಸಾವಿರ ಎಕರೆ ಜಾಗ ತಾಲೂಕು ಮಟ್ಟದಲ್ಲಿ ಲಭ್ಯವಿದೆ. ಅದನ್ನು ನಿವೇಶನ ಮಾಡಿ ಹಂಚಲು ಸಿದ್ಧತೆ ನಡೆಸಲಾಗುತ್ತಿದೆ. ಸೂರಿಲ್ಲದ ಬಡವರಿಗೆ ನಿವೇಶನ ನೀಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ವಸತಿ ಇಲಾಖೆಯ ಸಚಿವನಾಗಿ ಎಲ್ಲಾ ಹರ್ಡಲ್ಸ್ ನಿವಾರಣೆ ಮಾಡಿ ಲಾಜಿಕಲ್ ಎಂಡ್ಗೆ ತಂದಿದ್ದೇನೆ. ನಮ್ಮ ಸರ್ಕಾರ ಬರುವುದಕ್ಕೆ ಮೊದಲು 83 ಸಾವಿರ ಮನೆಗೆ ಟೆಂಡರ್ ಕರೆದಿತ್ತು. ಈಗ ಸುಮಾರು 50 ಸಾವಿರ ಮನೆ ಕಟ್ಟುವ ಹಂತಕ್ಕೆ ಬಂದಿದೆ.
ಫಲಾನುಭವಿಗಳಿಗೆ ಮನೆಗಳನ್ನು ನೀಡದೆ ಇದ್ದರೆ ಆರ್ಥಿಕ ಹೊರೆ ಆಗುತ್ತದೆ ಎಂದು ನಿರ್ಧಾರ ಮಾಡಿ ವಂದಿತ ಶರ್ಮ ಅವರ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಕೊಳಚೆ ಅಭಿವೃದ್ಧಿ ನಿಗಮದ ಅಡಿಯಲ್ಲಿ 1,80,000 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನು 15 ದಿನದಲ್ಲಿ ಆ ಮನೆಗಳಿಗೆ ಶೇ. 6ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡುವುದಕ್ಕೆ ಒಪ್ಪಿಗೆ ಸಿಗುತ್ತದೆ ಎಂದರು.
ಪಟ್ಟಣ ಪಂಚಾಯತ್, ಪುರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಸಾಲ ಮಂಜೂರಾತಿಗೆ ಒಪ್ಪಿಗೆ ಇದೆ. ಬೆಂಗಳೂರಿನಲ್ಲಿ 48 ಸಾವಿರ ಅರ್ಜಿ ಬಂದಿದೆ. 4 ಸಾವಿರ ಅರ್ಜಿಗಳನ್ನು ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
3,13,000 ಕುಟುಂಬಕ್ಕೆ ಕೊಳಚೆ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ವಸತಿ ನಿರ್ಮಾಣ ಮಾಡುವ ಯೋಜನೆ ನಡೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಂತೆ 6 ಎಕರೆ ಜಾಗ ಸಿಕ್ಕಿದೆ. ಅದರಲ್ಲಿ 600 ಮನೆ ನಿರ್ಮಾಣ ಮಾಡುವುದಕ್ಕೆ ತಯಾರಿ ನಡೆಯುತ್ತಿದೆ. ಆದರೆ 10 ಸಾವಿರ ಅರ್ಜಿ ಬಂದಿವೆ. ಇವುಗಳ ಪರಿಶೀಲನೆ ಮಾಡಿ ಅರ್ಹರಿಗೆ ಮನೆಗಳನ್ನು ಕೊಡಲಾಗುತ್ತದೆ ಎಂದರು.
ಈ ಯೋಜನೆಗೆ 10 ಸಾವಿರ ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ 3 ಸಾವಿರ ಕೋಟಿ ಹಣ ಬಂದಿದೆ. ನಾನು ಇನ್ನೂ 24 ತಿಂಗಳು ಇರುತ್ತೇನೆ ಎಂದುಕೊಂಡಿದ್ದೇನೆ. ಅಷ್ಟರಲ್ಲಿ ನಾನು ಈ ಎಲ್ಲಾ ಕೆಲಸ ಮುಗಿಸಬೇಕು ಅಂದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ 3 ವಲಯಗಳಲ್ಲಿ ಬಾಕಿಯಿರುವ ಹಣ ಬಿಡುಗಡೆಗೆ ಹೆಚ್ ಡಿ ರೇವಣ್ಣ ಆಗ್ರಹ